ಕೆರೆಕಟ್ಟೆ, ನದಿ ಮೂಲಗಳ ಸಂರಕ್ಷಣೆ ಎಲ್ಲರ ಕರ್ತವ್ಯ

17M.D.R.3
Published on

ಮದ್ದೂರು: ಜಲ ಮೂಲಗಳಾದ ಕೆರೆ, ಕಟ್ಟೆ, ನದಿಗಳನ್ನು ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮು ನೆಲ್ಲಿತಾಯ ತಿಳಿಸಿದರು.


ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕೆರೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿ, ಜಲಮೂಲಗಳನ್ನು ಉಳಿಸದೆ ಮುಂದೆ ಹೋದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 476 ನೇ ಕೆರೆ ಅಭಿವೃದ್ಧಿಗೆ ಮುಂದಾಗಿದ್ದು, ನಮ್ಮೂರು ನಮ್ಮ ಕರೆ ಅಭಿವೃದ್ಧಿಗೆ ಸ್ಥಳಿಯ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪೂಜ್ಯರ ಕನಸಿನ ಆಶಯದಂತೆ ಕೆರೆಗಳನ್ನು ಪುನಶ್ಚೇತನಗೊಳಿಸಿ, ಪೂರ್ವಿಕರು ಬಿಟ್ಟು ಹೋಗಿರುವ ಪುರಾತನ ಕೆರೆ-ಕಟ್ಟೆಗಳ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಕೆರೆಯು 10 ಎಕರೆ ವಿಸ್ತೀರ್ಣವಿದ್ದು, ಸಂಸ್ಥೆ ವತಿಯಿಂದ 3.5 ಲಕ್ಷ ರೂ. ಬಿಡುಗಡೆಯಾಗಿದೆ. ಗ್ರಾಮಸ್ಥರ ಸಹಕಾರದೊಡನೆ 3.5 ರೂ.ಗಳನ್ನು ಸಂಗ್ರಹಿಸಿ ಕೆರೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದರು.


ಕೆರೆ ಅಭಿವೃದ್ಧ್ದಿಯಿಂದ ಈ ಭಾಗದ 500 ಎಕರೆ ರೈತರ ಜಮೀನುಗಳಿಗೆ ನೀರೊದಗಿಸುವ ಜತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಲಿದ್ದು, ಈ ಭಾಗದ ಅಂತರ್ಜಲ ವೃದ್ಧಿಯಾಗಿ ಸಕಲ ಜೀವರಾಶಿಗೆ ನೀರಿನ ಸೌಲಭ್ಯ ಸಿಗುತ್ತದೆ ಎಂದರು.


ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಚೇತನಾ, ಕೆರೆ ಅಭಿವೃದ್ಧಿ ಅಧ್ಯಕ್ಷ ರಾಜಪ್ಪ, ಯೋಜನಾ ನಿರ್ದೇಶಕ ಯೋಗೇಶ್ ಕನ್ಯಾಡಿ, ಎಇಇ ಸುರೇಶ್, ಸ್ವ ಸಹಾಯ ಸಂಘದ ಸದಸ್ಯರು, ಸ್ಥಳಿಯ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net