ಕೆರೆ ಸ್ಥಿತಿಗತಿ ವೀಕ್ಷಿಸಿದ ಶಾಸಕ

27kglphoto-3
Published on

ಕೊಳ್ಳೇಗಾಲ : ರೈತರ ಮನವಿ ಮೇರೆಗೆ ತಾಲೂಕಿನ ಹೊಸ ಅಣಗಳ್ಳಿ ಬಡಾವಣೆ ಹೊರವಲಯದಲ್ಲಿರುವ ಪಾಪನ ಕೆರೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ವೀಕ್ಷಣೆ ಮಾಡಿದರು.
ಗುಂಡಾಲ್ ಜಲಾಶಯ ಹಳೇ ಸ್ಥಿರ ಅಚ್ಚುಕಟ್ಟು ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳ ಮನವಿ ಮೇರೆಗೆ ಶಾಸಕರು ಕೆರೆವೀಕ್ಷಣೆ ಮಾಡಿದ್ದು ರೈತರ ಸಮಸ್ಯೆಯನ್ನು ಆಲಿಸಿದರು.
ಈ ವೇಳೆ ಸಮಿತಿ ಅಧ್ಯಕ್ಷ ದಶರಥ ಮಾತನಾಡಿ, ಕಬಿನಿ ಜಲಾಶಯಗಳಿಂದ ಕೆರೆಗೆ ನೀರು ಪೂರೈಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆರೆಗಳು ಭರ್ತಿಯಾಗಿಲ್ಲ. ಇದ್ದರಿಂದ ಜಾನುವಾರುಗಳಿಗೆ ಸಮಸ್ಯೆ ಆಗಿದೆ. ಕೃಷಿ ಚಟುವಟಿಕೆಗೂ ತೊಂದರೆಯಾಗಿದೆ ಎಂದರು.
ಗುಂಡಾಲ್ ಜಲಾಶಯ ವ್ಯಾಪ್ತಿಗೆ ಹಲವು ಕೆರೆಗಳು ಬರುತ್ತದೆ. ಎಲ್ಲ ಕೆರೆಗಳ ಪರಿಸ್ಥಿತಿ ಶೋಚನೀಯವಾಗಿದ್ದು ಒತ್ತುವರಿ, ಹೂಳಿನ ಸಮಸ್ಯೆಯಿಂದ ಕೆರೆ ಹಾಳಾಗುತ್ತಿದೆ. ಅಂತೆಯೇ, ಕಾಲುವೆಗಳ ಹೂಳಿನಿಂದ ಕೆರೆಗಳಿಗೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದೆ ಎಂದರು.
ಕಬಿನಿಯಲ್ಲಿ ನೀರು ಬಿಟ್ಟಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ ಆದರೆ ಕೆರೆಗಳು ಭರ್ತಿ ಆಗಿಲ್ಲ. ಪಾಪನಕೆರೆ ಹಾಗು ಇದರ ಕಾಲುವೆಯಲ್ಲಿ 1,200 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಉಣಿಸಬಹುದಾಗಿದೆ. ಸದ್ಯ ಗುಂಡಾಲ್ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕೆರೆಗಳಿಗೆ ಬಿಟ್ಟರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಕೆರೆ ಒತ್ತುವರಿ, ಹೂಳು, ನೀರು ಪೂರೈಕೆ ವಿಚಾರವಾಗಿ ಆ.30 ಬಳಿಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ತಿಳಿಸಿದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಸಮಿತಿ ಸದ್ಯಸ್ಯರಾದ ನರಸಿಂಹನ್, ಚಿನ್ನಸ್ವಾಮಿ ಮಾಳಿಗೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net