ಕೆರೆ ನೀರು ಉಳಿವಿಗಾಗಿ ಪ್ರತಿಭಟನೆ; ಅಧಿಕಾರಿಗಳ ನಿರ್ಲಷ್ಯ ಆರೋಪ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

13ank news and photos 02
Published on

ಆನೇಕಲ್: ಆನೇಕಲ್ ತಾಲೂಕಿನಲ್ಲಿಯೇ ಅತೀದೊಡ್ಡ ಕೆರೆಯಾಗಿರುವ ಮುತ್ತಾನಲ್ಲೂರು ಕೆರೆ ನೀರು ಕುಡಿಯಲು ಹಾಗೂ ಬಳಸಲು ಯೋಗ್ಯವಾಗಿಲ್ಲ. ಆದ್ದರಿಂದ ಈ ಕೂಡಲೆ ಕೆರೆ ನೀರನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುತ್ತಾನಲ್ಲೂರಿನಿಂದ ನೂರಾರು ಜನ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸಮಾಜಸೇವೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಡಾ.ವೈ.ಚಿನ್ನಪ್ಪ ಚಿಕ್ಕಾಹಗಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಮುತ್ತಾನಲ್ಲೂರು ಕೆರೆ ಇತಿಹಾಸ ಪುರಾಣ ಪ್ರಸಿದ್ಧವಾಗಿದ್ದು ಇತ್ತೀಚಿನ ದಿನಗಳಲ್ಲಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳು ಹಾಗೂ ಪ್ರತಿಷ್ಠಿತ ಆಸ್ಪತ್ರೆಯಿಂದ ಬರುವ ಕಲುಷಿತ ನೀರನ್ನು ಸಂಸ್ಕರಣೆ ಮಾಡದೆ ಕೆರೆಗೆ ಬೀಡಲಾಗುತ್ತಿದೆ ಎಂದು ದೂರಿದರು.

ಈ ಹಿಂದೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ, ತಾಲೂಕು ದಂಡಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೆರೆ ಉಳಿಸುವಂತೆ ಮನವಿ ಮಾಡಿಕೊಂಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೋರಾಟಗಾರ ಟಿ.ವಿ.ಬಾಬು ತಿಳಿಸಿದರು.

ಪ್ರತಿಭಟನೆಯಲ್ಲಿ ಮುತ್ತಾನಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷೆ ಸುಜಾತಾ ವೈ. ಚಿನ್ನಪ್ಪ ಚಿಕ್ಕಹಾಗಡೆ, ರಾಜ್ಯಪ್ರಶಸ್ತಿ ವಿಜೇತ ಕೆ.ಮಹೇಶ್, ಮಹಿಳಾ ಮುಖಂಡರಾದ ಮುತ್ತಾನಲ್ಲೂರು ಪ್ರಸನ್ನ ಲಕ್ಷ್ಮೀ, ಸುಧಾ ಆರ್.ಕೃಷ್ಣಾ ರೆಡ್ದಿ, ಎಸ್.ಮಧುಸೂದನ್ ರೆಡ್ದಿ, ಗಂಧದ ನಾಡು ಜನಪರ ವೇದಿಕೆ ಅಧ್ಯಕ್ಷ ವಿಜಯರಾಮ್, ರಾಜಹುಲಿ ಯುವಕ ಸಂಘದ ಅಧ್ಯಕ್ಷ ವೈ.ಮುನಿಯಲ್ಲಪ್ಪ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಸ್.ಕೆ.ಲೊಕೇಶ್, ಎಸ್.ಕೆ.ಬಾಬು, ಮುತ್ತಾನಲ್ಲೂರು ಯುವ ಮುಖಂಡರಾದ ಎಮ್.ಕಿರಣ್, ನಾಗರಾಜ ರೆಡ್ಡಿ, ಜ್ಞಾನೇಂದ್ರ ರೆಡ್ದಿ, ಕೆ.ಲೊಕೇಶ್ ರೆಡ್ದಿ ಮತ್ತಿತರರು ಇದ್ದರು.

ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ. ಆದರೆ ವ್ಯವಸಾಯಕ್ಕೂ ಬಳಸದಷ್ಟು ಮಲಿನವಾಗಿದೆ. ಪ್ರಾಣಿ ಪಕ್ಷಿಗಳು ಸಹ ಈ ನೀರನ್ನು ಕುಡಿಯುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಪನದಂತೆ ನೀರಿನ ಮಲಿನ ಟಿಡಿಎಸ್ 200ರಷ್ಟು ಇದ್ದರೆ ಬಳಸಲು ಯೋಗ್ಯ, ಆದರೆ ಮುತ್ತಾನಲ್ಲೂರು ಕೆರೆಯ ನೀರು ಟಿಡಿಎಸ್ 800 ರಷ್ಟಿದ್ದು, ಈ ನೀರಿನಿಂದ ಸುತ್ತಮುತ್ತಲಿನ ಜನಕ್ಕೆ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂದು ಹೋರಾಟಗಾರ ಟಿ.ವಿ.ಬಾಬು ತಿಳಿಸಿದರು.

ಕೆರೆ ಉಳಿವಿಗಾಗಿ ರಾಜ್ಯಪಾಲರು ಒಂದು ಬುನಾದಿ ಹಾಕಿ ಕೆರೆ ಅಭಿವೃದ್ಧಿ ಮಾಡಿ ಕಲುಷಿತ ನೀರು ಬರದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತಾರೆ ಎಂಬ ಭರವಸೆ ಇದೆ. ಇಲ್ಲವಾದಲ್ಲಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ರಾಧಮ್ಮ ಮುತ್ತಾನಲ್ಲೂರು ನಾಗರಾಜ ರೆಡ್ಡಿ, ಮಹಿಳಾ ಹೋರಾಟಗಾರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net