

ಆಳಂದ: ದಿನ ಕಳೆದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಲ ಮೂಲಗಳು ಬತ್ತಿ ಹೋಗಿದ್ದರೆ, ಖಾಸಗಿ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಿಂದ ನೀರು ಪೂರೈಸುವ ಕೆಲಸ ಆಗಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಸರಸಂಬಾ, ಸಾವಳೇಶ್ವರ, ಅಂಬೇವಾಡ, ಕಿಣ್ಣಿಅಬ್ಬಾಸ, ಮಾದನಹಿಪ್ಪರಗಾ, ಝಳಕಿ (ಕೆ) ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಜಲಮೂಲಗಳನ್ನು ಪರಿಶೀಲಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಬೇಸಿಗೆ ಮುಗಿವವರೆಗೆ ಖಾಸಗಿ ಅವರಿಂದ ಕರಾರು ಒಪ್ಪಂದ ಪ್ರಕಾರ ನೀರು ಖರೀದಿಸಿ ಸರಬರಾಜು ಮಾಡಬೇಕು. ೧೫ ಕೋಟಿ ರೂ. ವೆಚ್ಚದಲ್ಲಿ ಕಿಣ್ಣಿಅಬ್ಬಾಸ- ಅಂಬೇವಾಡ ಮಧ್ಯೆ ನಡೆಯುತ್ತಿರುವ ಶಿವಪುರ ಮಾದರಿ ಕಾಮಗಾರಿಯನ್ನು ತ್ವರಿಗತಿಯಲ್ಲಿ ಮುಗಿಸಬೇಕು. ಕೆರೆ ತುಂಬುವ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಕೆರೆ ಹತ್ತಿರ ಬಾವಿ ತೋಡಿ ಮಾದನಹಿಪ್ಪರಗಾ ಗ್ರಾಪಂ ವ್ಯಾಪ್ತಿಯಲ್ಲಿ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ಸಾವಳೇಶ್ವರ ಗ್ರಾಪಂ ಅಧ್ಯಕ್ಷ ಹಿರಗಪ್ಪ ಕೈರಮಗಿ, ಉಪಾಧ್ಯಕ್ಷೆ ಸುನೀತಾ ಝಳಕಿ, ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಗ್ರೇಡ್-೨ ತಹಸೀಲ್ದಾರ್ ಭೀಮಣ್ಣಾ ಕುದುರಿ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿಯುವ ನೀರು ಯೋಜನೆ ಇಇ ಧನಗರ ಲದ್ದೆ, ಜೆಜೆಎಂ ಎಇಇ ವಿಜಯಕುಮಾರ, ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ, ಮಾದನಹಿಪ್ಪರಗಾ ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ್, ಪಿಡಿಒ ಸಿದ್ದರಾಮ ಬಬಲೇಶ್ವರ, ಕಂದಾಯ ನಿರೀಕ್ಷಕ ಅಲ್ಲಾವುದ್ದೀನ್, ಪ್ರಮುಖರಾದ ಮುಜಾಹಿದ್, ವಿನೋದಕುಮಾರ, ಸುನೀತಾ ಪೂಜಾರಿ, ಸರ್ದಾರ್ ಪಟೇಲ್, ಗುರು ಝಳಕಿ, ಮೌಲ್ಲಪ್ಪ ಸಿಂಗೆ, ಶಿವಲಿಂಗಪ್ಪ ನೆಲೋಗಿ, ಹಜರತ್ ಪಟೇಲ್ ಅಂಬೇವಾಡ ಇತರರಿದ್ದರು.
ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ಕೈ ಮಗ್ಗ ಕೇಂದ್ರಕ್ಕೆ ಭೇಟಿ ನೀಡಿ ಬಟ್ಟೆ ತಯಾರಿಸುವ ಕುರಿತು ಮಾಹಿತಿ ಪಡೆದು, ಕಾರ್ಮಿಕರ ಸಮಸ್ಯೆ ಆಲಿಸಿದರು.
ಸಿಟಿ ಸಮಸ್ಯೆ ಚರ್ಚಿಸಲು ಮತ್ತೊಮ್ಮೆ ಬರುವೆ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿಗಾ ವಹಿಸುವುದು ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕಾಗಿ ತಾಲೂಕುಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು. ಆಳಂದ ಸಿಟಿಗೆ ೧೦-೧೨ ದಿವಸಕ್ಕೊಮ್ಮೆ ನೀರು ಸರಬರಾಜು, ಶ್ರೀರಾಮ ಮಾರ್ಕೆಟ್ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಇಂದಿರಾ ಕ್ಯಾಂಟೀನ್, ಬಂಧಿಖಾನೆ ಶುರು ಮಾಡುವ ಕುರಿತು ಪತ್ರಕರ್ತರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಮರ್ಜಾದಲ್ಲಿ ಶೇ.೭೨ ನೀರಿದ್ದು ನಗರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ೧೦-೧೨ ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದು ನನ್ನ ಗಮನಕ್ಕೆ ಬಂದಿಲ್ಲ. ಸಿಟಿ ಸಮಸ್ಯೆ ಕುರಿತು ಚರ್ಚಿಸಲು ಮತ್ತೊಮ್ಮೆ ಭೇಟಿ ನೀಡುವೆ. ಆಳಂದ ಮತ್ತು ಜೇವರ್ಗಿ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಈಗಾಗಲೇ ೩ ನೋಟಿಸ್ ನೀಡಲಾಗಿದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಇನ್ನೊಬ್ಬರಿಗೆ ಕೆಲಸ ನೀಡಿ ಪೂರ್ಣಗೊಳಿಸಲಾಗುವುದು. ಬಂಧಿಖಾನೆಗೆ ಕಾಂಪೌಂಡ್ ನಿರ್ಮಿಸಲು ಅನುದಾನ ಬಂದಿದೆ, ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಶೀಘ್ರ ಕೆಲಸ ಮುಗಿಸಿ ಜೈಲು ಪ್ರಾರಂಭ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಹಳ್ಳಿಗಳಲ್ಲಿನ ಪುರಾತತ್ವ ಬಾವಿ ಪುನಶ್ವೇತನಗೊಳಿಸಿ: ಕುಡಿವ ನೀರಿನ ಸಮಸ್ಯೆ ನೀಗಿಸಲು ಗ್ರಾಮಗಳಲ್ಲಿರುವ ಪುರಾತನ ಬಾವಿಗಳನ್ನು ಪುನಶ್ವೇತನಗೊಳಿಸುವ ಕೆಲಸ ಮಾಡಬೇಕು. ಈ ಮೂಲಕ ಜನರಿಗೆ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು. ಸಾವಳೇಶ್ವರ ಗ್ರಾಪಂ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿ, ಇಂದು ವಿಶ್ವ ಜಲ ದಿನಾಚರಣೆ ಪ್ರಯುಕ್ತ ಕುಡಿವ ನೀರಿನ ಗುಣಮಟ್ಟ ಅರಿಯಲು ಆಳಂದ ತಾಲೂಕಿಗೆ ಪ್ರವಾಸ ಕೈಗೊಂಡಿದ್ದೇನೆ. ನಾವು ಕುಡಿಯುವ ನೀರು ಯೋಗ್ಯವಿದೆಯಾ ? ಇಲ್ವಾ ? ಎಂಬುದನ್ನು ಅರಿಯಲು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲುಎಸ್‌ಸಿ) ರಚನೆ ಮಾಡಲಾಗಿದೆ. ನೀರು ಪರೀಕ್ಷಾ ನಿರ್ವಹಣಾ ಕಿಟ್ ಸಹ ನೀಡಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಿ ಸಲಹೆ ನೀಡಿದರು. ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ ಮಾತನಾಡಿ, ಗ್ರಾಮಗಳಲ್ಲಿ ನಿರ್ಮಿಸಲಾದ ಪೈಪ್‌ಲೈನ್‌ಗಳು ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ಸರಿಯಾದ ರೀತಿಯಿಂದ ನಿರ್ವಹಣೆ ಮಾಡಬೇಕು. ನೀರು ಪೋಲಾಗದಂತೆ ಹಾಗೂ ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು. ಪಡಸಾವಳಿಯ ಪಂಪ್ ಆಪರೇಟರ್ ಚಂದ್ರಕಾಂತ ಕುಂಬಾರ ಅವರು ಗ್ರಾಮದಲ್ಲಿನ ೪ ಕೊಳವೆ ಬಾವಿಗಳ ನೀರನ್ನು ಸ್ಥಳದಲ್ಲೇ ಪರೀಕ್ಷಿಸಿ ಕುಡಿಯಲು ಯೋಗ್ಯವಾಗಿವೆ ಎಂದು ವರದಿ ನೀಡಿದರು.