ಕೆರೆ ತುಂಬಿಸುವ ಯೋಜನೆಗೆ ಜನಪ್ರತಿನಿಧಿಗಳ ಸಭೆ ಕರೆಯಿರಿ

23 ckm 6
ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ರೈತರು ಸಖರಾಯಪಟ್ಟಣ ಭಾಗದ ಕೆರೆ ತುಂಬಿಸುವ ಯೋಜನೆಗೆ ಎರಡು ಕ್ಷೇತ್ರದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರುದ್ರಮೂರ್ತಿ, ವಿಜಯಕುಮಾರ್, ವಸಂತ್ ಕುಮಾರ್, ಅಣ್ಣ ನಾಯ್ಕ, ಆಂಜನೇಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಖರಾಯಪಟ್ಟಣ ಭಾಗದ ಕೆರೆ ತುಂಬಿಸುವ ಯೋಜನೆಗೆ ಎರಡು ಕ್ಷೇತ್ರದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೊಂದ ಸಂತ್ರಸ್ಥ ಗ್ರಾಮಸ್ಥರು ಹಾಗೂ ರೈತರು ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥ ಎಚ್.ಸಿ.ಕಲ್ಮರುಡಪ್ಪ, ಸಖರಾಯಪಟ್ಟಣ ಹೋಬಳಿಯು ಸದಾಕಾಲ ಬರಗಾಲಕ್ಕೆ ತುತ್ತಾಗಿ ಗ್ರಾಮಸ್ಥರು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ತೀವ್ರ ತೊಂದರೆ ಅನುಭವಿಸುಂವತಾಗಿದೆ ಎಂದು ಹೇಳಿದರು.

ನಾಗೇನಹಳ್ಳಿ, ಕಂಚುಗಾರನಹಳ್ಳಿ, ಹೊಸಳ್ಳಿ, ಹುಲಿಕೆರೆ ಗ್ರಾಮಗಳ ಜನತೆಗೆ ನೀರಿನ ಅಭಾವ ನೀಗಿಸಲು ಸರ್ಕಾರದ ಮೇಲೆ ಒತ್ತಡ ಹೇರಿದ್ದರ ಪರಿಣಾಮದಿಂದ ಈ ಗ್ರಾಮಗಳಿಗೆ ಕೆರೆ ತುಂಬಿಸಲು ಯೋಜನೆಗೆ ಚಾಲನೆ ದೊರೆತು ಕಾಮಗಾರಿ ಪ್ರಗತಿಯಲ್ಲಿದೆ. ಅಯ್ಯನಕೆರೆ ತುಂಬಿ ಕೋಡಿ ಬಿದ್ದ ಹೆಚ್ಚುವರಿ ನೀರಿನಲ್ಲಿ ಅಲ್ಪ ಪ್ರಮಾಣದ ನೀರನ್ನು ಬಳಸಿಕೊಂಡು ಏತನೀರಾವರಿ ಮೂಲಕ ಕೆರೆತುಂಬಿಸುವ ಯೋಜನೆ ಇದಾಗಿದೆ ಎಂದರು.

ಪ್ರಸ್ತುತ ನೀರು ಹರಿಯುವ ಪ್ರಮಾಣ ಪ್ರತಿ ಸೆಕೆಂಡಿಗೆ ೩೫೦೦ ಲೀಟರ್. ಈ ಪೈಕಿ ೨.೫ ಲೀಟರ್ ಮಾತ್ರ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಈ ನೀರನ್ನು ಬಳಕೆ ಮಾಡಿಕೊಳ್ಳುವುದರಿಂದ ನೀರಿನ ಹರಿವಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಕಾರಣದಿಂದ ವೇದಾನದಿಯ ದಡದ ಗ್ರಾಮದ ಜನತೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಐದಾರು ನದಿಗಳು ಜನಿಸಿ ನೂರಾರು ಟಿಎಂಸಿಯಷ್ಟು ನೀರು ರಾಜ್ಯದ ವಿವಿಧ ಬೇರೆ ಜಿಲ್ಲೆ ಗಳಿಗೆ ಹರಿದು ಅಲ್ಲಿನ ಭೂಮಿಯನ್ನು ಹಸಿರು ಮಾಡುತ್ತಿವೆ. ಆದರೆ ನಮ್ಮ ಜಿಲ್ಲೆಗೆ ನೀರು ಬಳಕೆಯಾಗದಿ ರುವುದು ದುರ್ದೈವ. ಕೂಡಲೇ ರೈತರ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಯಬಹುದಾದ ಸಮಸ್ಯೆಯ ನ್ನು ಜಟಿಲಗೊಳಿಸುವುದು ಸರಿಯಲ್ಲ ಎಂದರು.

ಹೀಗಾಗಿ ಈ ಸರ್ಕಾರದಿಂದ ಎರಡು ಕ್ಷೇತ್ರದ ಶಾಸಕರು, ವಿಧಾನ ಪರಿಷತ್ತು ಸದಸ್ಯರ ಸಭೆ ಕರೆದು ರೈತರಲ್ಲಿರುವ ಗೊಂದಲ ಪರಿಹರಿಸಿ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮಸ್ಥರಾದ ರುದ್ರಮೂರ್ತಿ, ವಿಜಯಕುಮಾರ್, ವಸಂತ್‌ಕುಮಾರ್, ಅಣ್ಣನಾಯ್ಕ್, ಆಂಜನೇಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net