ಕೆರೆ ತುಂಬಿಸುವ ಯೋಜನೆ ನನೆಗುದಿಗೆ

29.. PYP.02
Published on

ಪಿರಿಯಾಪಟ್ಟಣ: ತಾಲೂಕಿನ 158ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ 295 ಕೋಟಿ ರೂ. ವೆಚ್ಚದ ಸಚಿವ ಕೆ.ವೆಂಕಟೇಶ್ ಅವರ ಮಹತ್ವಾಕಾಂಕ್ಷೆಯ ಬೃಹತ್ ಏತ ನೀರಾವರಿ ಯೋಜನೆ ಅನುದಾನದ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳಿಂದ ನನೆಗುದಿಗೆ ಬಿದ್ದಿದೆ.


ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೈಗೊಂಡ ಪರಿಶ್ರಮ ಪ್ರಸ್ತುತ ವ್ಯರ್ಥವಾಗಿದೆ. ಅರೆಮಲೆನಾಡು ಪ್ರದೇಶವಾಗಿರುವ ತಾಲೂಕಿನಲ್ಲಿ ಮಳೆಯಾಶ್ರಿತ ಬೆಳೆ ಹೊರತುಪಡಿಸಿ ಮತ್ತಿತರ ಬೆಳೆಗಳಿಗೆ ನೀರುಣಿಸಲು ಬೋರ್‌ವೆಲ್‌ಗಳ ಮೊರೆ ಹೋಗುವ ರೈತರಿಗೆ ಅಂತರ್ಜಲ ಮಟ್ಟ ಅಭಿವೃದ್ಧಿಗೊಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೆರೆಗಳು ವರ್ಷವಿಡೀ ಭರ್ತಿಯಿದ್ದಲ್ಲಿ ಅಂತರ್ಜಲ ಮಟ್ಟ ಸುಧಾರಿಸಿ ಬೋರ್‌ವೆಲ್‌ಗಳಲ್ಲಿ ಯಥೇಚ್ಛವಾಗಿ ನೀರು ಲಭಿಸಲಿದೆ ಎನ್ನುವ ಉದ್ದೇಶದಿಂದ ಸಿದ್ದರಾಮಯ್ಯ ಅವರು 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಶಾಸಕರಾಗಿದ್ದ ಕೆ.ವೆಂಕಟೇಶ್ ನೇತೃತ್ವದಲ್ಲಿ ತಾಲೂಕಿನ ಗಡಿ ಭಾಗದಲ್ಲಿರುವ ಕಾವೇರಿ ನದಿಯಿಂದ ನೀರನ್ನು ಮೇಲಕ್ಕೆತ್ತಿ ಕೆರೆಗಳನ್ನು ಭರ್ತಿ ಮಾಡುವ ಏತನೀರಾವರಿ ಯೋಜನೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ, ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು.


2018ರಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಸೇರಿದಂತೆ ತಾಲೂಕಿನಲ್ಲಿ ಸುಮಾರು ಒಂದು ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ತಾಲೂಕಿನ 158 ಕೆರೆಗಳಿಗೆ ನೀರು ತುಂಬಿಸಲು ಬೃಹತ್ ಗಾತ್ರದ ಪೈಪ್ ಅಳವಡಿಸುವ ಮೂಲಕ ಆರಂಭಗೊಂಡ ಕಾಮಗಾರಿ ವಿಧಾನಸಭಾ ಚುನಾವಣೆಯವರೆಗೂ ಚುರುಕಿನಿಂದಲೇ ಸಾಗಿತ್ತು.


ಕೆ.ಮಹದೇವ್ ಅವರಿಂದಲೂ ಪ್ರಯತ್ನ: 2018ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಕೆ.ಮಹದೇವ್ ತಮ್ಮ ಅವಧಿಯಲ್ಲಿ ಈ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲೇಬೇಕು ಎಂಬ ಛಲದೊಂದಿಗೆ ಸಮ್ಮಿಶ್ರ ಸರ್ಕಾರದ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹೇರಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿಸಿದರು. ಪರಿಣಾಮ, ಕಾಮಗಾರಿಯನ್ನು ಕೊಲ್ಲಾಪುರದ ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಗುತ್ತಿಗೆ ಪಡೆದಿತ್ತು. 246 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿತ್ತು. ಯೋಜನೆಗೆ ಅಗತ್ಯವಿರುವ ನೀರು ಸಂಗ್ರಹ ಘಟಕಗಳನ್ನು ನಿರ್ಮಿಸಲು ಮತ್ತು ಪೈಪ್‌ಲೈನ್ ಅಳವಡಿಕೆಗಾಗಿ ಭೂಮಿ ನೀಡುವ ರೈತರಿಗೆ ಪರಿಹಾರದ ಮೊತ್ತ 49 ಕೋಟಿ ರೂ. ವೆಚ್ಚ ಭರಸಲು ಪ್ರತ್ಯೇಕ ಅನುದಾನಕ್ಕಾಗಿ ಮತ್ತೆ ಅಂದು ಅಸ್ತಿತ್ವದಲ್ಲಿದ್ದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.


ಈಗಾಗಲೇ ತಾಲೂಕಿನ ಹಲವೆಡೆ ರೈತರ ಜಮೀನುಗಳಲ್ಲಿ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದರೂ ಈವರೆಗೂ ರೈತರಿಗೆ ಪರಿಹಾರಧನ ನೀಡಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಮತ್ತೆ ಕೆಲವೆಡೆ ರೈತರು ಮೊದಲು ಪರಿಹಾರದ ಹಣ ನೀಡಿ, ನಂತರ ನಮ್ಮ ಜಮೀನುಗಳಲ್ಲಿ ಪೈಪ್‌ಲೈನ್ ಮಾಡಿ ಎಂದು ಒತ್ತಡ ಹೇರಿ ಜಮೀನುಗಳಲ್ಲಿ ಜಾಗ ಬಿಡದೆ ಪಟ್ಟು ಹಿಡಿದರು. ತಮ್ಮ ಅವಧಿಯಲ್ಲಿ ಹೇಗಾದರೂ ಮಾಡಿ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಪಣ ತೊಟ್ಟಿದ್ದ ಶಾಸಕ ಕೆ.ಮಹದೇವ್ ಅವರಿಗೆ ಅನುದಾನದ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳಿಂದ ಅಧಿಕಾರಿಗಳು, ಗುತ್ತಿಗೆದಾರರ ಬೆಂಬಲ ದೊರಕಲಿಲ್ಲ.


ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಸಹ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿಳಂಬಗತಿಯ ಕಾಮಗಾರಿ ಬಗ್ಗೆ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟೆಲ್ಲ ಭಗೀರಥ ಪ್ರಯತ್ನಗಳು ನಡೆದರೂ 2023ರ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನ 158 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಉದ್ಘಾಟನೆ ಭಾಗ್ಯ ಕೂಡಿ ಬರಲೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net