ಕೆರೆ ಕೋಡಿ ಬಿದ್ದು ಮನೆಗಳಿಗೆ ನುಗ್ಗಿದ ನೀರು

14 HANUR 1
ಹನೂರು ಸಮೀಪದ ಕುರುಬರದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಮನೆಗಳಿಗೆ ನೀರು ನುಗ್ಗಿರುವುದು.
Published on

ಹನೂರು: ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಸುರಿದ ಜೋರು ಮಳೆಗೆ ಕುರುಬರದೊಡ್ಡಿ ಗ್ರಾಮದ ಕೆರೆ ಕೋಡಿ ಬಿದ್ದು ಮನೆಗಳಿಗೆ ನೀರು ನುಗ್ಗಿತ್ತಲ್ಲದೆ ಕೆಲವೆಡೆ ಕಿರು ಸೇತುವೆಗಳ ಮೇಲೆ ಅಾರ ನೀರು ಹರಿದು ಅವಾಂತರ ಸೃಷ್ಟಿಸಿತು.

ಸಮೀಪದ ಬಡಾವಣೆಯ ಶಿವಣ್ಣ, ಚಜ್ಜೇಗೌಡ, ಲಕ್ಷ್ಮಣ, ಕೆಂಪಮ್ಮ, ಪುಟ್ಟಮ್ಮ, ಹುಚ್ಚಮ್ಮ ಸೇರಿದಂತೆ ಇನ್ನಿತರ ಮನೆಗಳಿಗೆ ನೀರು ನುಗ್ಗಿತು. ಇದರಿಂದ ಗೃಹೋಪಯೋಗಿ ವಸ್ತುಗಳು ಹಾಗೂ ದಿನಸಿ ಪದಾರ್ಥಗಳು ಹಾನಿಯಾದವು. ಇತ್ತ ಉಡುತೊರೆ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ನಾಲೆಗಳ ಮೂಲಕ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ. ಇದರಿಂದ ಅಲ್ಲಲ್ಲಿ ಜಮೀನಿಗಳಿಗೆ ನೀರು ನುಗ್ಗಿದೆ.

ಕುರುಬರದೊಡ್ಡಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಶಾಸಕ ಆರ್.ನರೇಂದ್ರ ಹಾನಿಯಾದ ಸ್ಥಳವನ್ನು ಪರಿಶೀಲಿಸಿದರು. ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿದ್ದ ಗಿಡಗಂಟಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಸಂಚಾರ ಕಡಿತ: ಕೌದಳ್ಳಿ ರಾಮಾಪುರ ಮಾರ್ಗದಲ್ಲಿ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇವುಗಳ ಸಮೀಪದಲ್ಲಿಯೇ ಸಂಚಾರಕ್ಕೆ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಾತ್ರಿ ಸುರಿದ ಜೋರು ಮಳೆಗೆ ಮಣ್ಣಿನ ರಸ್ತೆಯು ಜಲಾವೃತವಾಗಿತ್ತು. ಹೀಗಾಗಿ ಸಂಚಾರ ಕಡಿತಗೊಂಡಿತ್ತು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಚಿಕ್ಕಲತ್ತೂರು ಗ್ರಾಮದ ಮೂಲಕ ಶುಕ್ರವಾರ ಸಂಚರಿಸಿದವು.

ಪಟ್ಟಣದಲ್ಲಿ ಹಾದು ಹೋಗಿರುವ ತಟ್ಟೆಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಶುಕ್ರವಾರ ಹೆಚ್ಚಾದ ಹಿನ್ನೆಲೆಯಲ್ಲಿ ಪಟ್ಟಣದ ಆಂಜನೇಯಸ್ವಾಮಿ ದೇಗುಲದ ಸಮೀಪದಲ್ಲಿನ ಕಿರು ಸೇತುವೆಯ ಮೇಲೆ ಯಥೇಚ್ಛ ನೀರು ಗಂಟೆಗಟ್ಟಲೇ ಹರಿಯಿತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ಬಂದ್ ಮಾಡಿದ್ದರು. ಇದರಿಂದ ದೇವಾಂಗಪೇಟೆ ಬಡಾವಣೆಯ ನಿವಾಸಿಗಳು ಸುತ್ತಿಬಳಸಿ ತೆರಳಬೇಕಾಯಿತು. ಇತ್ತ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲೇಮಾಳದ ಬಳಿಯ ಹಳ್ಳದಲ್ಲಿ ನೀರು ಹೆಚ್ಚಾದ ಪರಿಣಾಮ ಮುಖ್ಯರಸ್ತೆಯ ಮೇಲೆ ನೀರು ಹರಿಯಿತು. ಇದರಿಂದ ಮ.ಬೆಟ್ಟಕ್ಕೆ ತೆರಳುವ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಹೆಚ್ಚಿನ ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net