

ಕೆ.ಎಂ.ದೊಡ್ಡಿ: ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ಕೋಡಿ ಒಡೆದು ದಕ್ಷಿಣ ನಾಲೆ ಕೊಚ್ಚಿ ಹೋಗಿರುವ ಪ್ರದೇಶಕ್ಕೆ ಶಾಸಕ ಡಿಸಿ ತಮ್ಮಣ್ಣ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಳೆಕೆರೆ ನಾಲೆಯ ಕೋಡಿ ಒಡೆದು ಅಪಾರ ಬೆಳೆ ನಷ್ಟ ಉಂಟಾಗಿದೆ. ನಾಲೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣವಾಗಿದ್ದು, ಸುಮಾರು 1 ಸಾವಿರ ಎಕರೆ ವಿಸ್ತೀರ್ಣ ಹೊಂದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೋಡಿ ಒಡೆದು ದಕ್ಷಿಣ ನಾಲೆಗೆ ಹಾನಿಯಾಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಮುಖ್ಯಮಂತ್ರಿ ಜತೆ ಚರ್ಚಿಸಿ ಪರಿಹಾರ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಸೂಳೆಕೆರೆಯಿಂದ ಉತ್ತರ ನಾಲೆ ವ್ಯಾಪ್ತಿಯ 270, ದಕ್ಷಿಣ ನಾಲೆಯಿಂದ 3200 ಎಕರೆ ಪ್ರದೇಶಕ್ಕೆ ನೀರು ಉಣಿಸಲಾಗುತ್ತಿದ್ದು, ತಕ್ಷಣ ನಾಲೆ ದುರಸ್ತಿಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮದ್ದೂರು ತಾಲೂಕಿನ ಎರಡು ಕೆರೆಗಳು ಅಭಿವೃದ್ಧಿಯಾಗಬೇಕು. ಮದ್ದೂರಿನ ದೇಶಹಳ್ಳಿ(ಮದ್ದೂರುಕೆರೆ)ಕೆರೆ ಮತ್ತು ಮುಟ್ಟಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡಲು ಕೋರಿದ್ದೇನೆ ಎಂದರು.
ಮದ್ದೂರು ಕೆರೆ ಮತ್ತು ನಾಲೆ ಅಭಿವೃದ್ಧಿಗೆ 120 ಕೋಟಿ ರೂ., ಸೂಳೆಕೆರೆ ಮತ್ತು ನಾಲೆ ಅಭಿವೃದ್ಧಿಗೆ 75 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಕ್ಷಣದಿಂದ ನಾಲೆ ದುರಸ್ತಿಪಡಿಸಿ ರೈತರ ಬೆಳೆಗಳಿಗೆ ಕಾಲಕಾಲಕ್ಕೆ ಅಗತ್ಯ ನೀರು ನೀಡಬೇಕು. ಅನುದಾನ ನೀಡುವ ಜವಾಬ್ದಾರಿ ನನ್ನದು. ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವಾಲಯದ ಗಮನ ಸೆಳೆದು ಟೆಂಡರ್ ಪ್ರಕ್ರಿಯೆ ಇಲ್ಲದೆ ಹಾನಿಗೀಡಾಗಿರುವ ಆಕ್ವಡೆಕ್ಟ್ ಮತ್ತು ಕೋಡಿಯನ್ನು ಎತ್ತರಿಸಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.