ಕೆರೆ, ಕಲ್ಯಾಣಿ ಸ್ವಚ್ಛತೆಗೆ ಸಚಿವ ಸುಧಾಕರ್ ತಾಕೀತು

D SUDAKAR D HYR
Published on

ಚಿತ್ರದುರ್ಗ: ನಗರ ವ್ಯಾಪ್ತಿ, ನಗರಕ್ಕೆ ಹೊಂದಿಕೊಂಡಿರುವ ಕಲ್ಯಾಣಿ, ಕೆರೆಗಳ ಸ್ವಚ್ಛತೆ ಹಾಗೂ ನೀರು ಕಲುಷಿತವಾಗುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಲ್ಯಾಣಿ, ಕೆರೆಗಳ ಸಂರಕ್ಷಣೆಗೆ ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು, ಇದಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.
ಡಿಸಿ ಟಿ.ವೆಂಕಟೇಶ್ ಅವರು ಮಾತನಾಡಿ, ಕವಾಡಿಗರಹಟ್ಟಿ ಕಲುಷಿತ ನೀರಿನಿಂದಾದ ಅಹಿತಕರ ಘಟನೆಯನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಮೂಲಗಳ ಸ್ವಚ್ಛತೆ, ಕೆರೆ, ಕಲ್ಯಾಣಿ, ಹೊಂಡಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಮಾತನಾಡಿ, ಮಠದ ಕೆರೆ, ಮಲ್ಲಾಪುರ ಕೆರೆ, ಗೋನೂರು ಕೆರೆ, ರಾಣಿಕೆರೆ ಸಹಿತ ನಾನಾ ಕೆರೆಗಳ ಸ್ವಚ್ಛತೆ ಕಾರ‌್ಯ ತ್ವರಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಅವರು ಮಾತನಾಡಿ, ಮಠದ ಕೆರೆ ಅಭಿವೃದ್ಧಿ ಯೋಜನೆ ಸಿದ್ಧವಾಗಿದೆ ಎಂದರು.
ನೂತನ ಜಿಲ್ಲಾಡಳಿತ ಭವನದ ಕಾಮಗಾರಿ ಪರಿಶೀಲಿಸಲಾಗಿದೆ. 2025 ಮಾರ್ಚ್‌ನೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಡಿಸಿ ತಿಳಿಸಿದರು.
ಹಿರಿಯೂರು, ಚಿತ್ರದುರ್ಗ ನಗರಗಳ ಪ್ರಮುಖ ರಸ್ತೆಗಳ ವಿಸ್ತರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net