

ಹಾಸನ: ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವಾಡಿಕೆಯಂತೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ. ಹೇಮಾವತಿ ಜಲಾಶಯದಲ್ಲಿ ಜೂ.24ರಂದು ನೀರಿನ ಸಂಗ್ರಹಣಾ ಸಾಮರ್ಥ್ಯವು 31.180 ಟಿಎಂಸಿ ಸಂಗ್ರಹವಾಗಿದೆ. ಜಲಾಶಯಕ್ಕೆ ಒಳಹರಿವಿನ ಏರಿಕೆಯಿಂದ ಜಲಾಶಯವು ತುಂಬುವ ಸಂಭವವಿರುವುದರಿಂದ ಹೆಚ್ಚುವರಿ ನೀರನ್ನು ಹೇಮಾವತಿ ನದಿಗೆ ಹರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಜಲಾಶಯದಿಂದ ಹೇಮಾವತಿ ನದಿಗೆ ಹರಿಸಬಹುದಾದ ಹೆಚ್ಚುವರಿ ನೀರಿನ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ನಾಲೆಗಳ ಮುಖಾಂತರ ಕೆರೆ-ಕಟ್ಟೆಗಳಿಗೆ ಹರಿಸಲು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸೂಚಿಸಿದ್ದಾರೆ.
ಹೇಮಾವತಿ ಜಲಾಶಯದಿಂದ ನದಿ ಮತ್ತು ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲ ನಾಲೆಗಳಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸಲು ಜೂ.26ರಿಂದ ನೀರನ್ನು ಹರಿಸಲಾಗುವುದು. ಈ ಸಂದರ್ಭದಲ್ಲಿ ಯೋಜನಾ ವ್ಯಾಪ್ತಿಯಲ್ಲಿನ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ನೀರು ಪೋಲಾಗದಂತೆ ತುರ್ತು ಕ್ರಮಗಳನ್ನು ತೆಗೆದುಕೊಂಡು, ಯೋಜನಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಗೂ ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಟ್ಟುನಿಟಾಗಿ ಸೂಚಿಸಲಾಗಿದೆ. ಈ ಬಗ್ಗೆ ಯೋಜನಾ ವ್ಯಾಪ್ತಿಯಲ್ಲಿನ ಎಲ್ಲ ಸಾರ್ವಜನಿಕರು ಮತ್ತು ಅಚ್ಚುಕಟ್ಟುದಾರರು ಸುಗಮ ನೀರು ನಿರ್ವಹಣೆ ನಡೆಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಗೊರೂರು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.