ಕೆರೆ ಒತ್ತುವರಿ ತೆರವು ವಿಫಲತೆ ವಿರುದ್ಧ ಪ್ರಕರಣ ದಾಖಲು

CTD-----00003
Published on

ಚಿತ್ರದುರ್ಗ: ಭೂ ಕಬಳಿಕೆ ನಿಷೇಧ ಕಾಯ್ದೆ ಅನುಸಾರ ಕೆರೆಗಳ ಒತ್ತುವರಿ ತೆರವಿಗೆ ವಿಫಲರಾದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿ, ಬೃಹತ್, ಸಣ್ಣ ನೀರಾವರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಗ್ರಾ.ಪಂ. ಸೇರಿ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಲ ಮೂಲಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಸರ್ವೇ ಕೈಗೊಂಡು ಒತ್ತುವರಿ ತೆರವು ಮಾಡಲು ಸೂಚಿಸಿದರು.
ಯಾವುದೇ ಕಾರಣಕ್ಕೂ ಸುಪ್ರಿಂಕೋರ್ಟ್, ಹಸಿರು ನ್ಯಾಯಾಧೀಕರಣದ ತೀರ್ಪು ಉಲ್ಲಂಘಿಸಿ ಕೆರೆ, ಜಲಮೂಲಗಳ ಬಫರ್ ಜೋನ್‌ನಲ್ಲಿ ಶಾಶ್ವತ ನಿರ್ಮಾಣಕ್ಕೆ ಅನುಮತಿ ನೀಡದಂತೆ ತಾಕೀತು ಮಾಡಿದರು.

*ಸರ್ವೆಗೆ ಮೂರು ತಿಂಗಳ ಗಡುವು *
ಜಿಲ್ಲೆಯ 437 ಜಲಮೂಲಗಳ ಪೈಕಿ 137 ಕೆರೆಗಳ ಸರ್ವೆ ಹಾಗೂ 30 ಕೆರೆಗಳ ಒತ್ತು ವರಿ ಬಾಕಿ ಇದ್ದು ಈ ಎಲ್ಲವನ್ನೂ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಮೂರು ತಿಂಗಳು ಗಡುವ ನೀಡಿದರು.
ಜಿಲ್ಲೆಯಲ್ಲಿ 437 ಜಲಮೂಲಗಳಿವೆ. ಸಣ್ಣ ನೀರಾವರಿ ಇಲಾಖೆಯ 166 ಕೆರೆಗಳ ಪೈಕಿ ಎರಡರ ಸರ್ವೆ ಬಾಕಿ ಇದೆ. ಈ ಪೈಕಿ 75 ಕೆರೆಗಳಲ್ಲಿ ಒತ್ತುವರಿ ಗುರುತಿಸಿ 64ರಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. 11 ಕೆರೆಗಳ ಒತ್ತುವರಿ ಬಾಕಿಯಿದೆ ಎಂದು ಮಾಹಿತಿ ನೀಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಗ್ರಾಪಂ ವ್ಯಾಪ್ತಿಯ 269 ಕೆರೆಗಳ ಪೈಕಿ 134ರ ಸರ್ವೆ ಪೂರ್ಣವಾಗಿದ್ದು 135 ಬಾಕಿಯಿದೆ. 29ರಲ್ಲಿ ಒತ್ತುವರಿ ಗುರುತಿಸಿದೆ. 10 ಕೆರೆಗಳ ಒತ್ತುವರಿ ತೆರವಾಗಿದ್ದು 19ರಲ್ಲಿ ಬಾಕಿಯಿದೆ. ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 2 ಕೆರೆಗಳಿವೆ ಎಂದು ಮಾಹಿತಿ ನೀಡಿದರು.
ಬಯೋ ಫೆನ್ಸಿಂಗ್‌ಗೆ ಸೂಚನೆ: ಸರ್ವೆ ಪೂರ್ಣಗೊಂಡು ಸರಹದ್ದು ಗುರುತಿಸಿದ ಕೆರೆಗಳ ಸುತ್ತ ಟ್ರಂಚ್ ಹೊಡಿಸಬೇಕು. ಕಲ್ಲುಗಂಬದ ಬೇಲಿ ನಿರ್ಮಿಸಬೇಕು. ಸಸಿಗಳನ್ನು ಪಡೆದು ಬಯೋಫೆನ್ಸಿಂಗ್ ಅಳವಡಿಸಲು ಡಿಸಿ ಸೂಚಿಸಿದರು.

ಕೆರೆ ಸಂರಕ್ಷಣಾ ಸಮಿತಿ ಸಭೆಗೆ ಸೂಚನೆ
ಎಲ್ಲ ತಹಸೀಲ್ದಾರ್‌ರು ವಾರದೊಳಗೆ ತಾಲೂಕು ಕೆರೆ ಸಂರಕ್ಷಣೆ ಸಮಿತಿ ಸಭೆ ನಡೆಸಲು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಉಪ ವಿಭಾಧಿಕಾರಿ ನೇತೃತ್ವದಲ್ಲಿ 15 ದಿನಗಳೊಳಗೆ ಜಲಮೂಲಗಳ ಆಕಾರ್‌ಬಂದ್‌ನೊಂದಿಗೆ ಬಫರ್‌ಜೋನ್ ನಕ್ಷೆ ಸಿದ್ದಪಡಿಸಲು ಸೂಚಿಸಿದರು.
ನಗರದ ಮಠದ ಕುರಬರಹಟ್ಟಿ, ಹಿರಿಯೂರಿನ ಯರದಕಟ್ಟೆ, ಚಳ್ಳಕೆರೆ ನಗರಂಗೆರೆ, ಹೊಳಲ್ಕೆರೆ ಹೆಸರಗಟ್ಟೆ ಕೆರೆಗಳನ್ನು ನಗರಸಭೆ ಹಾಗೂ ಪ.ಪಂ.ಗಳಿಗೆ ಹಸ್ತಾಂತರಿಸಲು ಹಾಗೂ ಕೆರೆ ಸಂರಕ್ಷಣೆಗೆ ಯೋಜನೆ ರೂಪಿಸಲು ಹೇಳಿದರು. ಮಠದ ಕುರುಬರಹಟ್ಟಿ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಎಸಿ ಎಂ.ಕಾರ್ತಿಕ್, ಕೆರೆ ಸಂರಕ್ಷಣೆ, ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ತಜ್ಞ ಮಲ್ಲಿಕಾರ್ಜುನ್, ಭೂದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ,ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ತಹಸೀಲ್ದಾರರಾದ ಡಾ.ನಾಗವೇಣಿ, ರೆಹಮಾನ್ ಪಾಷ, ತಿರುಪತಿ ಪಾಟೀಲ್, ಬಿ.ಬಿ.ಫಾತೀಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net