ಹನೂರು: ತಾಲೂಕಿನ ಒಡೆಯರಪಾಳ್ಯದಲ್ಲಿ ಒತ್ತುವರಿ ಮಾಡಲಾಗಿದ್ದ ಕೆರೆ ಜಾಗವನ್ನು ಶುಕ್ರವಾರ ತಹಸೀಲ್ದಾರ್ ಆನಂದಯ್ಯ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಗ್ರಾಮದ ಸರ್ವೇ ನಂ.238ರಲ್ಲಿ 8.90 ಎಕರೆ ಜಾಗವಿದ್ದು, ಇದರಲ್ಲಿ 1.45 ಸೆಂಟ್ ಕೆರೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಇದರಿಂದ ಸಂಚಾರಕ್ಕೆ ತೊಡಕಾಗಿತ್ತು. ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಕಳೆದ ಐದಾರು ವರ್ಷಗಳಿಂದ ಜಿಲ್ಲಾಧಿಕಾರಿ, ತಹಸೀಲ್ದಾರ್, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರನ್ನು ಒತ್ತಾಯಿಸಿದ್ದರು. ಆದರೆ ಒತ್ತುವರಿ ಕಾರ್ಯ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಒತ್ತುವರಿದಾರರ ಸಭೆಯನ್ನು ಕರೆದು ಮೂಲ ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಈವರೆಗೂ ಸಲ್ಲಿಸಿರಲಿಲ್ಲ. ಒತ್ತುವರಿ ತೆರವುಗೊಳಿಸುವ ಸಂಬಂಧ ನ.15 ರಂದು ಹನೂರಿನಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಈ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿತ್ತು. ಕೂಡಲೇ ಕ್ರಮಕೈಗೊಂಡು ಒತ್ತುವರಿಯನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಆನಂದಯ್ಯ ಅವರಿಗೆ ಡಿಸಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಕೆರೆ ಒತ್ತುವರಿ ಸ್ಥಳದಲ್ಲಿನ ಅಂಗಡಿಗಳನ್ನು ತೆರವುಗೊಳಿಸಿ ಈ ಜಾಗವನ್ನು ಹುತ್ತೂರು ಗ್ರಾಮ ಪಂಚಾಯಿತಿ ಸುಪರ್ದಿಗೆ ನೀಡಲಾಯಿತು. ತಾಪಂ ಇಒ ಶ್ರೀನಿವಾಸ್, ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಪಿಡಿಒ ಕಾಸವ್ವ ಅಜ್ಜಪ್ಪ ಕುರುಬರ, ಗ್ರಾಪಂ ಅಧ್ಯಕ್ಷೆ ಗಿರೀಜಾ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಪುಟ್ಟವೀರನಾಯ್ಕ, ಮೇಘಾ, ಮಹದೇವಸ್ವಾಮಿ, ಶೇಖರ್ ಇನ್ನಿತರರು ಇದ್ದರು.