

ಮೈಸೂರು: ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಬೇಕು. ಅದು ಬಿಟ್ಟು ಎಲ್ಲ ದೇವಸ್ಥಾನಗಳನ್ನು ಅನಧಿಕೃತ ಎಂದು ಪರಿಗಣಿಸುವುದು ಸರಿಯಲ್ಲ. ಜನರು ಶಾಂತಿ, ನೆಮ್ಮದಿಗೋಸ್ಕರ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಜಿಲ್ಲಾಡಳಿತ ದೇವಸ್ಥಾನಗಳನ್ನು ಒಡೆದು ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ದೇವಸ್ಥಾನಗಳನ್ನು ಒಡೆದರೆ ಅದು ಭಕ್ತಾದಿಗಳ ಎದೆಗೆ ಹೊಡೆದಂತೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಒಂದುವೇಳೆ ಒತ್ತುವರಿ ತೆರವುಗೊಳಿಸದೆ ಇದ್ದರೆ ನ್ಯಾಯಾಂಗ ನಿಂಧನೆಯಾಗುತ್ತದೆ. ಆದರೆ, ದೇಶದಲ್ಲಿ ಅಧಿಕಾರಿಗಳು ಎಷ್ಟು ಕೆರೆಗಳನ್ನು ತೆರವುಗೊಳಿಸಿದ್ದಾರೆ? ಕೆರೆ ತೆರವುಗೊಳಿಸಲು ತೋರದ ಆಸಕ್ತಿಯನ್ನು ದೇವಸ್ಥಾನ ಒಡೆಯಲು ಏತಕ್ಕೆ ತೋರುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ದೇವಸ್ಥಾನ ಹಾಗೂ ಕೆರೆಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಫುಟ್‌ಪಾತ್‌ನಲ್ಲಿ ಜನರ ಸಂಚಾರಕ್ಕೆ ಧಕ್ಕೆಯಾಗುವ ರೀತಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡುವುದು ಸರಿಯಲ್ಲ. ಅಂತಹ ದೇವಸ್ಥಾನ ಗಳನ್ನು ಬೇಕಾದಲ್ಲಿ ತೆರವುಗೊಳಿಸಲಿ. ಆದರೆ, ಜನರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟು ಮಾಡದ ದೇವಸ್ಥಾನಗಳನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಪುರಾತನ ಕಾಲದ ದೇವಸ್ಥಾನಗಳನ್ನು ಏತಕ್ಕೆ ಕೆಡವುತ್ತಿದ್ದೀರಿ? ಜನರು ದಂಗೆ ಏಳಬೇಕೆಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದೀರಾ? ಜನರು ದಂಗೆ ಎದ್ದರೆ ನೀವು ಉಳಿಯುತ್ತೀರಾ? ಜನರ ತಾಳ್ಮೆಯನ್ನು ಅಧಿಕಾರಿಗಳು ಪರೀಕ್ಷೆ ಮಾಡಬಾರದು. ಬೇರೆ ಯಾವುದೇ ಜಿಲ್ಲೆಗಳಲ್ಲಿ ಈ ರೀತಿ ದೇವಸ್ಥಾನಗಳನ್ನು ಒಡೆಯುತ್ತಿಲ್ಲ. ಮೈಸೂರಿನವರು ಶಾಂತಿಪ್ರಿಯರು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.