

ಪಾಂಡವಪುರ: ತಾಲೂಕಿನ ತೊಣ್ಣೂರು ಕೆರೆಯ ನೀರಿನ ಒತ್ತಡ ಕಡಿಮೆ ಮಾಡಲು ಜೆಸಿಬಿ ಮೂಲಕ ಕೆರೆ ಏರಿ ಕೊರೆಯಲು ಮುಂದಾಗಿದ್ದ ಅಧಿಕಾರಿಗಳಿಗೆ ಶನಿವಾರ ರೈತರು ಛೀಮಾರಿ ಹಾಕಿ ವಾಪಾಸ್ ಕಳುಹಿಸಿದರು.
ತಾಲೂಕಿನಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತೊಣ್ಣೂರು ಕೆರೆ ಅಪಾಯದ ಮಟ್ಟದಲ್ಲಿ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೆರೆ ಏರಿಯ ಮೇಲಿನ ಒತ್ತಡ ಕಡಿಮೆ ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳು ಏರಿಯ ಒಂದು ಭಾಗವನ್ನು ಕೊರೆದು ನೀರನ್ನು ಹೊರಬಿಡಲು ಮುಂದಾಗಿದ್ದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಲಕ್ಷ್ಮೀಸಾಗರ ಮತ್ತು ತೊಣ್ಣೂರು ಗ್ರಾಮದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯಾರನ್ನು ಕೇಳಿ ಏರಿ ಕೊರೆಯುತ್ತಿದ್ದೀರಾ..ಗ್ರಾಮಗಳನ್ನು ಮುಳುಗಿಸಿ ರೈತರನ್ನು ಬೀದಿಗೆ ನಿಲ್ಲಿಸಬೇಕು ಎಂದು ಬಂದಿದ್ದೀರಾ..ಏರಿಯನ್ನು ಸಣ್ಣ ಪ್ರಮಾಣದಲ್ಲಿ ಕೊರೆದಾಗ ನೀರಿನ ರಭಸಕ್ಕೆ ಏರಿಯೇ ಕುಸಿದರೆ ಇದಕ್ಕೆಲ್ಲ ಯಾರೂ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಪ್ರಶ್ನೆಗಳಿಗೆ ಉತ್ತರಿಸಲಾಗದ ಅಧಿಕಾರಿಗಳು ಮೌನಕ್ಕೆ ಶರಣಾದರು. ಅರ್ಧದಷ್ಟು ಕೊರೆದಿದ್ದ ಮಣ್ಣನ್ನು ವಾಪಾಸ್ ತುಂಬಿಸಿ ಕೆಲಸ ಸ್ಥಗಿತಗೊಳಿಸಲಾಯಿತು. ಇದಕ್ಕೂ ಮೊದಲು ಮಳೆಯಿಂದ ಕೋಡಿ ಬಿದ್ದಿದ್ದ ತೊಣ್ಣೂರು ಕೆರೆಯನ್ನು ಶಾಸಕ ಸಿ.ಎಸ್.ಪುಟ್ಟರಾಜು ವೀಕ್ಷಣೆ ಮಾಡಿ, ಅನಾಹುತ ಸಂಭವಿಸದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.