

ಅರಕಲಗೂಡು: ತಾಲೂಕಿನ ದುಮ್ಮಿ ಕೆರೆ ಕೋಡಿ ಬಿದ್ದು ಬೆಳೆ ಹಾನಿಗೀಡಾಗಿ ಏರಿ ಕುಸಿಯುವ ಹಂತಕ್ಕೆ ತಲುಪಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ಯೋಗಾರಮೇಶ್ ಆಗ್ರಹಿಸಿದರು.
ಕೆರೆ ಏರಿ ಕುಸಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ದುಮ್ಮಿ ಕೆರೆಯ ಏರಿ ಕುಸಿದಿದ್ದು, ಒಡೆಯುವ ಹಂತದಲ್ಲಿದೆ.ಕೋಡಿ ನೀರು ಜಮೀನಿನ ಮೇಲೆ ಹರಿದು ಅಪಾರ ಪ್ರಮಾಣದ ಬೆಳೆ ನ?್ಟವಾಗಿದೆ. ಕೆರೆ ತುಂಬಿ ಎರಡು ಕಡೆಗಳಲ್ಲಿ ಏರಿ ಕುಸಿದಿದ್ದು ಕೆರೆ ಒಡೆಯುವ ಸಾಧ್ಯತೆ ಇದೆ. ಕೆರೆ ಏರಿ ಒಡೆದರೆ ಮುಂದಿನ ಮೂರು ಕೆರೆಗಳು ಒಡೆಯುವ ಸಂಭವವಿದ್ದು ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ಹಾಗೂ ರೈತರ ಜಮೀನು ಬೆಳೆ ಹಾಳಾಗುವ ಸಂಭವ ಇದೆ. ಆದ್ದರಿಂದ ಕೂಡಲೇ ಕೆರೆ ನೀರನ್ನು ಕಡಿಮೆ ಮಾಡಿಸಿ ಏರಿಯನ್ನು ಭದ್ರಪಡಿಸಿ ಮುಂದಾಗುವ ಅಪಾಯವನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೋಡಿ ನೀರು ಕಾಲುವೆ ಮುಚ್ಚಿದ್ದರಿಂದ ನೀರು ಜಮೀನಿನ ಮೇಲೆ ಹರಿದು ಭತ್ತದ ಬೆಳೆ ಹಾನಿಯಾಗಿದೆ. ಈ ಕೆರೆ ಒಡೆದರೆ ಉಳಿದ ಮೂರು ಕೆರೆಗಳು ಒಡೆಯಲಿದ್ದು ಅಪಾರ ಹಾನಿ ಉಂಟಾಗಲಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಸ್ಥಳಕ್ಕೆ ಅಗಮಿಸಿ ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಈ ಹಿಂದೆ ಮಲ್ಲಾಪುರ ಕೆರೆ ಕೋಡಿಬಿದ್ದು ರಸ್ತೆ ಮೇಲೆ ಹರಿದ ಪರಿಣಾಮ ರಸ್ತೆ ಕೊಚ್ಚಿ ಹೋಗಿ ಮಿನಿ ಜರಿಯೇ ನಿರ್ಮಾಣವಾಗಿತ್ತು. ಈ ವೇಳೆ ಜನಪ್ರತಿನಿಧಿಗಳು, ತಹಸಿಲ್ದಾರ್ ಅವರು ಅಗಮಿಸಿ, ಮಳೆ ನಿಂತ ಬಳಿಕ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಮಳೆ ನಿಂತು 2 ತಿಂಗಳು ಕಳೆದರೂ ದುರಸ್ತಿಗೆ ಮುಂದಾಗಿಲ್ಲ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ಅವಘಡ ಸಂಭವಿಸುವ ಸಂಭವ ಹೆಚ್ಚಿದೆ. ಯಾರಿಗಾದರೂ ಗುಂಡಿಯಲ್ಲಿ ಬಿದ್ದು ಅವಘಡಸಂಭವಿಸಿದರೆ ತಾಲೂಕು ಅಡಳಿತವೇ ನೇರಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.