ಕೆರೆ ಅಭಿವೃದ್ಧಿಯಲ್ಲಿ ಅವ್ಯವಹಾರ!

13
Published on

ಅಧಿಕಾರಿಗಳ ಮಾಹಿತಿ ಕೇಳಿ ಬೆರಗಾದ ಜಿಲ್ಲಾಧಿಕಾರಿ ಶುಭಕಲ್ಯಾಣ್​

ತಿಪಟೂರು: ಅನಿರೀಕ್ಷಿತವಾಗಿ ತಾಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​, ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಈಚನೂರು ಕೆರೆ ಪರಿಶೀಲಿಸಿ, ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಕಂಡು ಬೆರಗಾದರು.

ನಗರದ ಜನತೆಗೆ ಕುಡಿಯವ ನೀರು ಸರಬರಾಜಿಗಾಗಿ ಬಳಸಲ್ಪಡುತ್ತಿರುವ ಈಚನೂರು ಜಲಸಂಗ್ರಹಾಗಾರದ ಹೂಳೆತ್ತಿ, ಕೆರೆ ನವೀಕರಿಸುವ ಸಲುವಾಗಿ ಕೈಗೊಳ್ಳಲಾಗಿದ್ದ 120 ಕೋಟಿ ರೂ. ವೆಚ್ಚದ ಯೋಜನೆ ಬಗ್ಗೆ ಸ್ಥಳದಲ್ಲಿದ್ದ ನಗರ ನೀರು ಸರಬರಾಜು ಇಂಜಿನಿಯರ್​ ಅವರನ್ನು ವಿಚಾರಿಸಿದರು. ಪ್ರಾರಂಭದಲ್ಲಿ 4 ಕೋಟಿಯ ಕಾಮಗಾರಿಯಷ್ಟೇ ಆಗಿದೆ ಎಂದ ಅಧಿಕಾರಿಯ ಹೇಳಿಕೆ ಒಪ್ಪದ ಜಿಲ್ಲಾಧಿಕಾರಿಗಳು, ಹೂಳೆತ್ತುವ ಯೋಜನೆಗೆ 60 ಕೋಟಿ ರೂ. ರ್ಖಚಾಗಿರುವ ದಾಖಲೆ ಇದೆಯಲ್ಲ ಎಂದು

ಮರು ಪ್ರಶ್ನೆ ಮಾಡಿದರು. ಈ ವೇಳೆ ಅಧಿಕಾರಿಯಿಂದ ಸಮಂಜಸ ಉತ್ತರ ಬಾರದಿದ್ದಾಗ 60 ಕೋಟಿ ರೂ. ಖರ್ಚು ಮಾಡಿ ಕೆರೆಯನ್ನು ಈ ರೀತಿ ದುಸ್ಥಿತಿಗೆ ತಂದಿರುವ ಬಗ್ಗೆ ಅಧಿಕಾರಿಗಳು, ಆಯುಕ್ತರಿಂದ ಸಮಜಾಯಿಷಿ ಕೇಳಿ, ಮಾಹಿತಿ ನೀಡುವಂತೆ ಸೂಚಿಸಿದರು.

ಸ್ಥಳದಲ್ಲಿದ್ದ ಈಚನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್​.ಉದಯ್​ಕುಮಾರ್​, ಕುಡಿಯುವ ನೀರಿಗೆ ಬಳಸಿಕೊಳ್ಳಿ ಎಂದು ಗ್ರಾಮಸ್ಥರು ಬರೆದುಕೊಟ್ಟ ಈಚನೂರು ಕೆರೆ ಇಂತಹ ದುಸ್ಥಿತಿಗೆ ಬರಲು ನಗರಸಭೆ ಆಯುಕ್ತರೇ ನೇರ ಹೊಣೆ. ಅವರ ಬೇಜವಾಬ್ದಾರಿಯಿಂದ ಇಂದು ಈಚನೂರು ಕೆರೆ ನೀರು ಮುಟ್ಟಲು ಕೂಡ ಯೋಗ್ಯವಿಲ್ಲದಂತಾಗಿದೆ. ಇದೇ ಕಲುಷಿತ ನೀರು ತುಮಕೂರಿಗೂ ಹರಿದಿದೆ ಎಂದು ಆರೋಪಿಸಿದಾಗ ಸ್ಥಳದಲ್ಲಿದ್ದ ಅಧಿಕಾರಿಗಳು ತಬ್ಬಿಬ್ಬಾದರು.

ನಂತರ ನೊಣವಿನಕೆರೆ, ಕೆರೆ ವೀಕ್ಷಿಸಿದ ಜಿಲ್ಲಾಧಿಕಾರಿಗಳು ತಾಲೂಕಿನ ಚೌಡ್ಲಾಪುರ ಗ್ರಾಮದ 11 ರೈತರಿಗೆ ಸಿಗಬೇಕಿರುವ ಭೂಪರಿಹಾರ ಕುರಿತ ಸಮಸ್ಯೆ ಬಗೆಹರಿಸುವಂತೆ ಡಿಡಿಎಲ್​ಆರ್​ಗೆ ಸ್ಥಳದಲ್ಲೇ ಆದೇಶಿಸಿ. ಎತ್ತಿನಹೊಳೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟು ಇಲ್ಲಿವರೆಗೂ ಭೂಪರಿಹಾರ ಪಡೆಯದೇ ಇರುವ ಅತಿ ಹೆಚ್ಚಿನ ಸಂಖ್ಯೆಯುಳ್ಳ ಯಗಚೀಕಟ್ಟೆ ಗ್ರಾಮಸ್ಥರಿಗೆ ಕೂಡಲೇ ಅವರಿಗೆ ಸಂದಾಯವಾಗಬೇಕಿರುವ ಪರಿಹಾರವನ್ನು ಇತ್ಯರ್ಥಪಡಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದರು. ನಗರದ ಹಾಸನ ವೃತ್ತದ ಉದ್ದೇಶಿತ ರೈಲ್ವೆ ಮೇಲ್ಸೇತುವೆ ಮತ್ತು ಶೆಟ್ಟಿಹಳ್ಳಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net