ಕೆಮ್ಮಿದ್ದರೆ ಕ್ಷಯ ಪರೀಕ್ಷೆ ಮಾಡಿಸಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಸಲಹೆ

15-Manjunath-HSK-01 WEB 3
Published on

ಹೊಸಕೋಟೆ: ಕ್ಷಯ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯಾಗಿದ್ದು, ಗ್ರಾಮಗಳಲ್ಲಿ ಯಾರಾದರೂ ಹಲವು ದಿನಗಳಿಂದ ಕೆಮ್ಮುತಿದ್ದರೆ ಅಥವಾ ತೂಕ ಕಡಿಮೆಯಾಗುತ್ತಿದ್ದರೆ ಅಂತಹವರನ್ನು ಗುರುತಿಸಿ, ಕಫ ಪರೀಕ್ಷೆ ಮಾಡಿಸುವಂತೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ತಿಳಿಸಿದರು.

ನಗರದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮಂಗಳವಾರ ಏರ್ಪಡಿಸಿದ್ದ ಕ್ಷಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷಯರೋಗ ಕುರಿತಂತೆ ಸಮಗ್ರ ಆರೋಗ್ಯ ಶಿಕ್ಷಣ ನೀಡುವ ಮೂಲಕ 2025ಕ್ಕೆ ದೇಶವನ್ನು ಕ್ಷಯಮುಕ್ತ ಭಾರತವನ್ನಾಗಿ ಮಾಡಲು ಸಹಕರಿಸಬೇಕು ಎಂದರು. ಒಬ್ಬ ಕ್ಷಯ ರೋಗಿ ಚಿಕಿತ್ಸೆ ಪಡೆಯದಿದ್ದರೆ ವರ್ಷಕ್ಕೆ ಆರು ಜನರಿಗೆ ಕ್ಷಯ ಹರಡುತ್ತಾನೆ. ಆದ್ದರಿಂದ ಕಾಯಿಲೆ ಕಾಣಿಸಿದ ತಕ್ಷಣ ಸೂಕ್ತ ಚಿಕಿತ್ಸೆ ಮಾಡಿಸಿಕೊಂಡು ನಿಯಮಿತವಾಗಿ ಮಾತ್ರೆ ತೆಗೆದುಕೊಂಡರೆ ಖಂಡಿತವಾಗಿಯೂ ಕಾಯಿಲೆಯಿಂದ ದೂರವಾಗಬಹುದು ಎಂದರು. ತಾಲೂಕು ಕ್ಷಯರೋಗ ವಿಭಾಗದ ಮುಖ್ಯಸ್ಥ ಸುದೀಪ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 128 ಕ್ಷಯ ರೋಗಿಗಳಿಗೆ ಉಚಿತವಾಗಿ ಔಷಧ ನೀಡುತ್ತಿದ್ದು, ಎಲ್ಲರೂ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕು ಆಶಾ ಮೇಲ್ವಿಚಾರಕಿ ಮಹಾದೇವಿ, ಪೌಷ್ಟಿಕ ಆಹಾರ, ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕ್ಷಯರೋಗ ಘಟಕದ ಸಿಬ್ಬಂದಿ ಚಂದ್ರು ಮಾತನಾಡಿ, ಕ್ಷಯ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಅವರ ಖಾತೆಗಳಿಗೆ ಮಾಸಿಕ 500 ರೂ.ಗಳನ್ನು ಪೌಷ್ಟಿಕ ಆಹಾರ ಸೇವನೆಗಾಗಿ ಜಮಾ ಮಾಡಲಾಗುತ್ತಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net