ಕೆಮ್ಮಣ್ಣುನಾಲೆ ಸಮಸ್ಯೆಗೆ ಶಾಶ್ವತ ಪರಿಹಾರ

12M.D.R.1
ಕೆಮ್ಮಣ್ಣುನಾಲೆಯ ಸಮಸ್ಯೆ ಕುರಿತು ಶಾಸಕ ಕೆ.ಎಂ.ಉದಯ್ ಪುರಸಭಾ ಮುಖ್ಯಾಧಿಕಾರಿ ಅಶೋಕ್ ಅವರೊಂದಿಗೆ ಚರ್ಚಿಸಿದರು. ತಾರಾ, ಮನೋಜ್, ಕಮಲ್, ಸಿದ್ದರಾಜು, ಎಂ.ಸಿ.ಬಸವರಾಜು, ಲಕ್ಷ್ಮಣ್ ಚನ್ನಸಂದ್ರ, ವಿ.ಸಿ.ಉಮಾಶಂಕರ್ ಇದ್ದರು.
Published on

ಮದ್ದೂರು: ಕೆಮ್ಮಣ್ಣುನಾಲೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ವಿಜಯವಾಣಿ ಪತ್ರಿಕೆಯಲ್ಲಿ ಜು.12 ರಂದು ಕೆಮ್ಮಣ್ಣುನಾಲೆ ಕಲುಷಿತ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿಯ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಹಾಗೂ ಪುರಸಬಾ ಅಧಿಕಾರಿಗಳ ಜತೆಯಲ್ಲಿ ಬುಧವಾರ ಪಟ್ಣದ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೆಮ್ಮಣ್ಣು ನಾಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಕೆಮ್ಮಣ್ಣುನಾಲೆಗೆ ಒಳಚರಂಡಿ ನೀರು ಸೇರದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ನಾಲೆಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಕೊನೆ ಭಾಗದ ಜಮೀನುಗಳಿಗೆ ನೀರು ಹೋಗುವಂತೆ ನಾಲೆಯಲ್ಲಿ ಸ್ವಚ್ಛ ಮಾಡಲಾಗುವುದು. ಮುಂದಿನ ದಿನಗಳಲ್ಲಿ ವಿಶೇಷ ಅನುದಾನ ತಂದು ಕೆಮ್ಮಣ್ಣು ನಾಲೆಯನ್ನು ಆಧುನಿಕರಣಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಮುಂದಾಗುವುದಾಗಿ ಭರವಸೆ ನೀಡಿದರು. ಅಲ್ಲದೆ ಮದ್ದೂರಿನಿಂದ ಚನ್ನಸಂದ್ರ ನಾಲಾರಸ್ತೆಗೆ ಡಾಂಬರೀಕರಣ ಮಾಡುವುದಾಗಿ ಭರವಸೆ ನೀಡಿದರು.
ಜನಸಂಖ್ಯೆಗೆ ಅನುಗುಣವಾಗಿ ನಾಲೆಗಳ ಆಧುನಿಕರಣ ಮಾಡಬೇಕಾಗಿದೆ. ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಿ ಪಟ್ಟಣದಲ್ಲಿರುವ ಎಲ್ಲ ನಾಲೆಗಳ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲಾಗುವುದು. ಕೆಮ್ಮಣ್ಣು ನಾಲೆಗೆ ಸಂಪರ್ಕ ಕಲ್ಪಿಸಿರುವ ಎಲ್ಲ ಒಳ ಚರಂಡಿಗಳ ಸಂಪರ್ಕವನ್ನು ಕಡಿತಗೊಳಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುರಸಭಾ ಸದಸ್ಯರಾದ ಮನೋಜ್, ಕಮಲ್, ಸಿದ್ದರಾಜು, ಮುಖ್ಯಾಧಿಕಾರಿ ಅಶೋಕ್, ಕಾವೇರಿ ನೀರಾವರಿ ನಿಗಮದ ಎಇ ತಾರಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ರಮೇಶ್, ಹನುಮಂತು, ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ತೆಂಗುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಶಂಕರ್ ಇದ್ದರು.

ಪಟ್ಟಣದ ಹೃದಯ ಭಾಗದಲ್ಲಿರುವ ಕೆಮ್ಮಣ್ಣುನಾಲೆ ಇಷ್ಟೊಂದು ಅಶುಚಿತ್ವಗೊಂಡು, ಪಟ್ಟಣದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇಷ್ಟು ದಿನ ಕಾಲಹರಣ ಮಾಡಿರುವುದು ನಿಜಕ್ಕೂ ಬೇಸರ ಸಂಗತಿ. ಮುಂದಿನ ದಿನಗಳಲ್ಲಿ ಈ ಬೇಜಾಬ್ದಾರಿ ಮುಂದುವರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ.ಉದಯ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net