

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಾಂತವಾರು ಪ್ರಣಾಳಿಕೆ ರಚನೆಗೆ ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಜಿ. ಪರಮೇಶ್ವರ ಅಧ್ಯಕ್ಷರಾಗಿರುವ ಪ್ರಣಾಳಿಕೆ ರಚನೆ ಸಮಿತಿಗೆ ನಾನು ಉಪಾಧ್ಯಕ್ಷನಾಗಿದ್ದೇನೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಪ್ರಣಾಳಿಕೆ ರಚನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
2023ರ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಉದ್ದೇಶಿಸಿದ್ದೇವೆ. ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ನೇತಾರ ರಾಹುಲ ಗಾಂಧಿ ಅವರು ಬರುವುದಾಗಿ ಹೇಳಿದ್ದಾರೆ. ಸಮಾವೇಶಕ್ಕೆ ಸ್ಥಳ ನಿಗದಿ ಮಾಡಿಲ್ಲ. ಮಧ್ಯ ಕರ್ನಾಟಕ ಭಾಗದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಿದ್ದೇವೆ. ಶಿವಮೊಗ್ಗದಲ್ಲಿಯೇ ಮಾಡಬೇಕೆಂಬ ತುಡಿತ ನನಗಿಲ್ಲ. ಇದಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದ ಸಮಾವೇಶ, ಸಭೆ ಅಯೋಜನೆ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದ ಬಳಿಕ ಬಿಜೆಪಿಗೆ ರೈತರ ಬಗ್ಗೆ ವಾಕರಿಕೆ ಬಂದಿದೆ. ಅದು ಅಂದಿನಿಂದ ಸತತವಾಗಿ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಬೀಜ, ಗೊಬ್ಬರ ಬೆಲೆ ಏರಿಕೆ ಮಾಡಿ ರೈತರ ಬೆನ್ನು ಮುರಿದಿದೆ. ಕಿಸಾನ್ ಸಮ್ಮಾನ ಯೋಜನೆಯಡಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರೂ. ಹಣ ಹಾಕಿ ಬೆಲೆ ಏರಿಕೆ ಮೂಲಕ 60 ಸಾವಿರ ರೂ. ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.