

ಎನ್.ಆರ್.ಪುರ: ಗಣರಾಜ್ಯೋತ್ಸವ ದಿನ ಸಂಜೆ ಕರ್ನಾಟಕ ಪಬ್ಲಿಕ್ ಸ್ಕೂಲ್ ರಂಗ ಮಂದಿರದಲ್ಲಿ ವಿವಿಧ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಗಣರಾಜ್ಯೋತ್ಸವ ಹಾಗೂ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ 13 ವಿದ್ಯಾರ್ಥಿಗಳನ್ನು ಪುರಸ್ಕರಿಸಲು ನಿರ್ಧರಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿ, ತಾಲೂಕು ಸರ್ಕಾರಿ ನೌಕರರ ಸಂಘದಿಂದ ಸನ್ಮಾನ ಮಾಡುವುದಾಗಿ ತಿಳಿಸಿದರು.
ಗಣರಾಜ್ಯೋತ್ಸವದಂದು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಿದ ನಂತರ ಕುವೆಂಪು ಕ್ರೀಡಾಂಗಣದಲ್ಲಿ ಪೊಲೀಸ್, ಗೃಹ ರಕ್ಷಕದಳ ಹಾಗೂ ಮಕ್ಕಳಿಂದ ಪಥ ಸಂಚಲನ, ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ೆ.1ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ತನುಜಾ ಟಿ. ಸವದತ್ತಿ ತಿಳಿಸಿದರು.
ಪಪಂ ಅಧ್ಯಕ್ಷೆ ಸುರೈಯಾಬಾನು, ಶಿರಸ್ತೇದಾರ್ ವೇಣುಗೋಪಾಲ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್, ಡಿಎಸ್‌ಎಸ್ ಮುಖಂಡ ಡಿ.ರಾಮು, ಎಚ್.ಎಂ.ಶಿವಣ್ಣ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಜಯಂತಿ, ಅಭಿನವ ಪ್ರತಿಭಾ ವೇದಿಕೆ ಅಧ್ಯಕ್ಷ ಅಭಿನವ ಗಿರಿರಾಜ್, ಸದಸ್ಯ ಮಂಜು.ಎನ್.ಗೌಡ, ತಾಲೂಕು ಕುರುಬ ಸಮಾಜದ ಮುಖಂಡ ಪುರುಷೋತ್ತಮ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.