ಕೆನರಾ ಬ್ಯಾಂಕ್ ಮ್ಯಾನೇಜರ್ ಮನೆಯಲ್ಲಿ ದರೋಡೆ

udp-theft
Published on

ಹಾಸನ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಸುಮಾರು 6.14 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದರೋಡೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ನುಗ್ಗೇಹಳ್ಳಿಯ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಪ್ರವೀಣ್ ಕುಮಾರ್ ಅವರ ಪಟ್ಟಣದ ಕಸ್ತೂರಬಾ ರಸ್ತೆಯಲ್ಲಿರುವ ಮನೆಯಲ್ಲಿ ಕಳವು ಆಗಿದೆ. ಪ್ರವೀಣ್ ಅವರು ತಮ್ಮ ಪತ್ನಿ ಏ.10ರಂದು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಮಗು ಮತ್ತು ಪತ್ನಿ ನೋಡಲು ಗಂಗಾವತಿಗೆ ಹೋಗಿದ್ದರು. ಏ.17ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮನೆ ಕಳ್ಳತನ ಆಗಿರುವುದು ತಿಳಿದುಬಂದಿದೆ.

ಆಯುಧದಿಂದ ಲಾಕರ್ ಮೀಟಿ ಅದರಲ್ಲಿದ್ದ 15ಗ್ರಾಂ ತೂಕದ ಚಿನ್ನದ ಎರಡು ಬ್ರಾೃಸ್ಲೆಟ್, 8 ಚಿನ್ನದ ಉಂಗುರಗಳು, 6 ಗ್ರಾಂ ತೂಕದ ಚಿನ್ನದ ಚೈನು, 15ಗ್ರಾಂ ತೂಕದ ಚಿನ್ನದ ನೆಕ್ಲೆಸ್, ಮೂರು ಜೊತೆ ಕಿವಿ ಓಲೆ, ಚಿನ್ನದ ಮೂರು ಚೈನು, ಎರಡು ಬಳೆಗಳು, 5 ಗ್ರಾಂ ತೂಕದ ಚಿನ್ನದ ಒಂದು ಪೆಂಡೆಂಟ್ ಸೇರಿ ಒಟ್ಟು 151 ಗ್ರಾಂ ಚಿನ್ನಾಭರಣ, 25ಗ್ರಾಂ ತೂಕದ ಬೆಳ್ಳಿಯ ಬಳೆಗಳು, 15 ಗ್ರಾಂ ಮತ್ತು 30 ಗ್ರಾಂ ತೂಕದ ಬೆಳ್ಳಿಯ ಎರಡು ಜೊತೆ ಕಾಲು ಚೈನು, 40 ಗ್ರಾಂ ಮತ್ತು 10 ಗ್ರಾಂ ತೂಕದ ಎರಡು ಜೊತೆ ಬೆಳ್ಳಿಯ ದೀಪಗಳು, 6 ಗ್ರಾಂ ತೂಕದ ಒಂದು ಜೊತೆ ಕಿವಿಯ ಓಲೆಗಳು ಸೇರಿ 126 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net