ಕೆಡಿಸಿಸಿಗೆ 7.72 ಕೋ.ರೂ. ನಿವ್ವಳ ಲಾಭ

18sirsi1a
Published on

ವಿಜಯವಾಣಿ ಸುದ್ದಿಜಾಲ ಶಿರಸಿ: ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೊ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ 2019- 20ನೇ ಸಾಲಿನಲ್ಲಿ 7.72 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು.

ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಬ್ಯಾಂಕ್ 101ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ವೇಳೆ ಬ್ಯಾಂಕಿನ ಷೇರು ಬಂಡವಾಳ 74.92 ಕೋಟಿ ರೂ., ನಿಧಿಗಳು 137.19 ಕೋಟಿ ರೂ., ಠೇವು 2336.66 ಕೋಟಿ ರೂ., ಒಟ್ಟು ಆದಾಯ 228.28 ಕೋಟಿ ರೂ. ಆಗಿದೆ. ಸಾಲಬಾಕಿ 1784.46 ಕೋಟಿ ರೂ., ದುಡಿಯುವ ಬಂಡವಾಳ 3128.15 ಕೋಟಿ ರೂ. ತಲುಪಿದೆ. ಹೊರಬಾಕಿ ಇರುವ ಅಲ್ಪಾವಧಿ ಕೃಷಿ ಸಾಲಗಳಿಗೆ ಸಂಬಂಧಿಸಿ ಈವರೆಗೆ ಜಿಲ್ಲೆಯ 78000 ರೈತರಿಗೆ 469 ಕೋಟಿ ರೂ.ಗಳಷ್ಟು ಸಾಲಮನ್ನಾ ಸೌಲಭ್ಯ ಸಿಕ್ಕಿದೆ. ಇನ್ನೂ ಸುಮಾರು 3000 ರೈತರಿಗೆ 20 ಕೋಟಿ ರೂ.ಗಳಷ್ಟು ಸಾಲಮನ್ನಾ ಹಣ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬಡ್ಡಿ ರಿಯಾಯಿತಿ ಯೋಜನೆಗೆ ಸಂಬಂಧಿಸಿ ಜಿಲ್ಲೆಗೆ ಸುಮಾರು 54 ಕೋಟಿ ರೂ.ಗಳಷ್ಟು ಬಿಡುಗಡೆ ಮಾಡಬೇಕಿದೆ ಎಂದು ತಿಳಿಸಿದರು.

ಔದ್ಯೋಗಿಕ ಸಾಲ ಯೋಜನೆಯಲ್ಲಿ 1023 ಘಟಕಗಳಿಗೆ 483 ಕೋಟಿ ರೂ. ಸಾಲ ಪೂರೈಸಲಾಗಿದೆ. ವರದಿ ವರ್ಷದ ಅಂತ್ಯಕ್ಕೆ 397 ಘಟಕಗಳಿಂದ 235 ಕೋಟಿ ಸಾಲ ಬಾಕಿ ಇದೆ. ಹೌಸಿಂಗ್ ಸಾಲ ಯೋಜನೆಯಡಿ ಈವರೆಗೆ 1533 ಜನರಿಗೆ 112 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಫಾಮ್ರ್ ಹೌಸ್ ಸಾಲ ಯೋಜನೆಯಡಿ ಈವರೆಗೆ 7.16 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ವಾಹನ ಸಾಲ ಯೋಜನೆಯಲ್ಲಿ ಈ ವರೆಗೆ 346 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಕೆಸಿಸಿ ಸಾಲದ ಯೋಜನೆಯಡಿ ಈವರೆಗೆ 164 ಪ್ರಾಥಮಿಕ ಸಹಕಾರಿ ಸಂಘಗಳ 95215 ರೈತ ಸದಸ್ಯರಿಗೆ 822 ಕೋಟಿ ರೂ. ಬೆಳೆಸಾಲ ಮಂಜೂರು ಮಾಡಿದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ಹೊಂದಿದ 43010 ಗ್ರಾಹಕರಿಗೆ ಹಣ ಸಂದಾಯವಾಗಿದೆ ಎಂದು ತಿಳಿಸಿದರು.

ಈ ವೇಳೆ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ರಾಮಕೃಷ್ಣ ಹೆಗಡೆ ಕಡವೆ, ಗಜಾನನ ಪೈ, ಜಿ.ಆರ್.ಹೆಗಡೆ, ಎಸ್.ಎಲ್.ಘೊಟ್ನೇಕರ, ಎಲ್.ಟಿ. ಪಾಟೀಲ, ಬೀರಣ್ಣ ನಾಯಕ, ವಿಶ್ವನಾಥ ಭಟ್ಟ, ಬ್ಯಾಂಕ್ ವ್ಯವಸ್ಥಾಪಕ ಎಸ್.ಪಿ. ಚೌಹಾಣ ಹಾಗೂ ಇತರರು ಇದ್ದರು.

ವಾರ್ಷಿಕ ಪ್ರಶಸ್ತಿ ಪ್ರಕಟ, 21ರಂದು ಪ್ರದಾನ: ಕೆಡಿಸಿಸಿ ಬ್ಯಾಂಕ್ ವತಿಯಿಂದ ದಿ.ಜಿ.ಎಸ್.ಹೆಗಡೆ ಅಜ್ಜೀಬಳ ಸ್ಮರಣಾರ್ಥ ಜಿಲ್ಲೆಯ ಉತ್ತಮ ಸಹಕಾರಿಗೆ ನೀಡುವ ಅಜ್ಜೀಬಳ ಸಹಕಾರ ಪ್ರಶಸ್ತಿಗೆ ಹೊನ್ನಾವರದ ರಾಘವ ವಿಷ್ಣು ಬಾಳೇರಿ ಹಾಗೂ ಉತ್ತಮ ಸಹಕಾರಿ ನೌಕರ ಪ್ರಶಸ್ತಿಗೆ ಯಲ್ಲಾಪುರದ ಮಹಾಬಲೇಶ್ವರ ಸುಬ್ರಾಯ ಭಟ್ಟ ಆಯ್ಕೆಯಾಗಿದ್ದು, ಡಿ.21ರಂದು ನಡೆಯಲಿರುವ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದೇ ರೀತಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೀಡುವ ಸುಂದರ್ ರಾವ್ ಪಂಡಿತ ಪ್ರಶಸ್ತಿಗೆ ಶಿರಸಿಯ ಟಿ.ಆರ್.ಸಿ ಬ್ಯಾಂಕ್ ಭಾಜನವಾಗಿದೆ. ತಾಲೂಕು ಮಟ್ಟದ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಗೆ ಶಿರಸಿ ತಾಲೂಕಿನ ಮುಂಡಗನಮನೆ, ಸಿದ್ದಾಪುರದ ಹೆಗ್ಗರಣಿ ಸೊಸೈಟಿ, ಮುಂಡಗೋಡಿನ ಚವಡಳ್ಳಿ-ಮಳವಳ್ಳಿ ಸೇವಾ ಸಹಕಾರಿ ಸಂಘ, ಯಲ್ಲಾಪುರ ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘ, ಹಳಿಯಾಳದ ರೈತರ ಸೇವಾ ಸಹಕಾರಿ ಸಂಘ, ಜೊಯಿಡಾದ ಪ್ರಧಾನಿ ಕೃಷಿ ಸೇವಾ ಸಹಕಾರಿ ಸಂಘ, ಕಾರವಾರದ ಮಾಜಾಳಿ ಸೇವಾ ಸಹಕಾರಿ ಸಂಘ, ಅಂಕೋಲಾದ ಹೆಗ್ಗಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಕುಮಟಾ ವಾಲಗಳ್ಳಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ, ಹೊನ್ನಾವರದ ಹಡಿನಬಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಭಟ್ಕಳದ ಮುರ್ಡೆಶ್ವರ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಆಯ್ಕೆಯಾಗಿದ್ದು, ಪ್ರತಿ ಸಂಘಕ್ಕೆ ತಲಾ 5 ಸಾವಿರ ನಗದು ನೀಡಿ ಪುರಸ್ಕರಿಸಲಾಗುವುದು ಎಂದು ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net