ಕೆಡಿಸಿಸಿ ಬ್ಯಾಂಕ್ ಚುನಾವಣೆ, 23 ಅಭ್ಯರ್ಥಿಗಳು ಕಣದಲ್ಲಿ

6sirsi3
Published on

ಶಿರಸಿ: ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಕಣದಲ್ಲಿರುವ ಸ್ಪರ್ಧಿಗಳು ಮತಬೇಟೆ ಆರಂಭಿಸಿದ್ದಾರೆ. ತಮ್ಮ ಸಾಧನೆಗಳನ್ನು ಒಳಗೊಂಡ ಕರಪತ್ರದ ಜತೆಗೆ ಮತದಾರರ ಭೇಟಿಯ ಮೂಲಕ ಗೆಲುವಿಗಾಗಿ ಕಸರತ್ತು ಆರಂಭಿಸಿದ್ದಾರೆ.

ಒಟ್ಟು 16 ಕ್ಷೇತ್ರಗಳ ಪೈಕಿ 6ರಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದ 10 ಕ್ಷೇತ್ರಗಳಿಗೆ ನ. 11ರಂದು ಚುನಾವಣೆ ನಡೆಯಲಿದೆ. ಕಣದಲ್ಲಿರುವ 23 ಸ್ಪರ್ಧಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೆ ಕರಪತ್ರ ಮಾಡಿಕೊಂಡು ಪ್ರಚಾರ ನಡೆಸುತ್ತಿರುವ ಹಲವು ಸ್ಪರ್ಧಿಗಳು ತಮ್ಮ ಸಾಧನೆ, ಕಾರ್ಯಚಟುವಟಿಕೆಯ ಸಾಧನೆಯನ್ನು ತೋರುತ್ತಿದ್ದಾರೆ. ಹೊಸ ಸ್ಪರ್ಧಿಗಳು ತಮ್ಮ ಕ್ಷೇತ್ರದ ವ್ಯಾಪ್ತಿಯ ಪ್ರತೀ ಮತದಾರರನ್ನು ತಲುಪುತ್ತಿದ್ದರೆ, ಈ ಹಿಂದೆ ನಿರ್ದೇಶಕರಾಗಿ ಈಗ ಪುನರಾಯ್ಕೆ ಬಯಸುತ್ತಿರುವವರು ಹಿಂದಿನ ಚುನಾವಣೆಯಲ್ಲಿ ತಮ್ಮಪರ ಮತ ಚಲಾಯಿಸಿದವರನ್ನು ಇನ್ನಷ್ಟು ಮುತುವರ್ಜಿಯಿಂದ ನೋಡುತ್ತಿದ್ದಾರೆ. ಇನ್ನೂ ಕೆಲ ಸ್ಪರ್ಧಿಗಳು ಮತದಾರರಿಗೆ ಆಮಿಷ ಒಡ್ಡುವ, ಬೆದರಿಕೆ ಹಾಕುವ ಕಾರ್ಯ ಮಾಡುತ್ತಿರುವ ಬಗ್ಗೆ ವಿವಿಧ ಹಾಲು ಉತ್ಪಾದಕ ಸಹಕಾರಿ ಸಂಘಗಳ ಅಧ್ಯಕ್ಷರು ಬಹಿರಂಗವಾಗಿ ತಮ್ಮ ಆಕ್ಷೇಪವನ್ನೂ ಹೊರ ಹಾಕಿದ ಘಟನೆಯೂ ನಡೆದಿದೆ.

ಪುನರಾಯ್ಕೆಗೆ ಸಂಕಷ್ಟ ತಂದ ಹೊಸಬರು: ಬ್ಯಾಂಕ್​ಗೆ ಈ ಹಿಂದೆ ನಿರ್ದೇಶಕರಾಗಿದ್ದ ಬಹುತೇಕ ಸ್ಪರ್ಧಿಗಳ ಪುನರಾಯ್ಕೆಗೆ ಹೊಸ ಸ್ಪರ್ಧಿಗಳು ಅಡ್ಡಗಾಲಾಗಿದ್ದಾರೆ. ತಮ್ಮದೆ ಪ್ರಭಾವ ಬೆಳೆಸಿಕೊಂಡು ಚುನಾವಣೆ ಸಕಣಕ್ಕೆ ಧುಮುಕಿರುವ ಹೊಸ ಸ್ಪರ್ಧಿಗಳಲ್ಲಿ ಶೇ. 50 ರಷ್ಟು ಸ್ಪರ್ಧಿಗಳು ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಶೇ. 50ರಷ್ಟು ಈ ಹಿಂದಿನ ನಿರ್ದೇಶಕರೇ ಆಯ್ಕೆಯಾಗುವ ಸಾಧ್ಯತೆ ಇದ್ದರೂ ಅವರ ಗೆಲುವು ಪ್ರಯಾಸ ಎಂದೇ ಹೇಳಲಾಗುತ್ತಿದೆ. ನಿಕಟಪೂರ್ವ ನಿರ್ದೇಶಕರು ತಮ್ಮ ಕ್ಷೇತ್ರಕ್ಕೆ ನೀಡಿದ ಕೊಡುಗೆ? ಅನುದಾನದ ಲೆಕ್ಕಾಚಾರವನ್ನು ಬಿಚ್ಚುತ್ತಿರುವ ಹೊಸ ಸ್ಪರ್ಧಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಚಾರಕ್ಕೆ ವೇಗ ನೀಡಿದ್ದಾರೆ. ಬ್ಯಾಂಕ್ ನಿರ್ದೇಶಕರಾಗಿ ಹೆಚ್ಚಿನ ಕೆಲಸ ಮಾಡಲಿಲ್ಲ. ಇದೀಗ ಪುನರಾಯ್ಕೆ ಬಯಸಿ ಚುನಾವಣೆ ಕಣದಲ್ಲಿರುವವರಿಗೆ ಇದು ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಣಾಹಣಿಯ ಕಣ: ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ರಾಮಕೃಷ್ಣ ಕಡವೆ ಹಾಗೂ ಜಿ.ಆರ್. ಹೆಗಡೆ ಬೆಳ್ಳೆಕೇರಿ ನಡುವೆ ಸ್ಪರ್ಧೆ ನಡೆಯಲಿದೆ. ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಷಣ್ಮುಖ ಗೌಡ ಹಾಗೂ ವಿವೇಕ ಭಟ್ಟ ಗಡಿಹಿತ್ಲು ಸೆಣಸಾಡಲಿದ್ದಾರೆ. ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ ರವಿಚಂದ್ರ ದುಗ್ಗಳ್ಳಿ ಹಾಗೂ ಎಲ್.ಟಿ. ಪಾಟೀಲ ಮಧ್ಯೆ ಹಾಗೂ ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶ್ರೀಧರ ಭಾಗ್ವತ್ ಮತ್ತು ಗಜಾನನ ಪೈ ನಡುವೆ ನೇರ ಹಣಾಹಣಿ ನಡೆಯಲಿದೆ.

ಅಂಕೋಲಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ವಿಜಯ ಕುಮಾರ ನಾಯಕ ಮತ್ತು ಬೀರಣ್ಣ ನಾಯಕ ನಡುವೆ ಸ್ಪರ್ಧೆ ಇದೆ. ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಿವಾನಂದ ಕಡತೋಕಾ ಮತ್ತು ಮಹಾಬಲೇಶ್ವರ ಹೆಗಡೆ ಸ್ಪರ್ಧಿಸಲಿದ್ದಾರೆ. ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ.ಆರ್. ಹೆಗಡೆ ಸೋಂದಾ, ಗಿರೀಶ ಭಟ್ಟ, ಚಂದ್ರು ದೇವಾಡಿಗ, ವಿನಾಯಕ ಹೆಗಡೆ ನಡುವೆ ಸ್ಪರ್ಧೆ ನಡೆಯಲಿದೆ.

ಔದ್ಯೋಗಿಕ ಸಹಕಾರಿ ಸಂಘಗಳ (ನೇಕಾರರ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಜಿ.ಟಿ. ಹೆಗಡೆ ತಟ್ಟಿಸರ ಮತ್ತು ವಿಶ್ವನಾಥ ಭಟ್ಟ ಹೊನ್ನಾವರ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ. ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮೋಹನದಾಸ ನಾಯಕ, ವಸಂತ ನಾಯಕ, ಎಸ್.ಎಂ. ಹೆಗಡೆ ಮಾನೀಮನೆ ಸೆಣಸಲಿದ್ದಾರೆ. ಹಾಲು ಉತ್ಪಾದಕರ/ ಕಾರ್ವಿುಕರ/ ಕೂಲಿಕಾರರ/ ಇತರ ಸಹಕಾರಿ ಸಂಘಗಳ (ಫಾರ್ವಿುಗ್ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಸುರೇಶ್ಚಂದ್ರ ಕೆಶಿನ್ಮನೆ ಮತ್ತು ಭಾಸ್ಕರ ಹೆಗಡೆ ಕಾಗೇರಿ ನಡುವೆ ಹಣಾಹಣಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net