ಕೆಡಿಪಿ ಸಭೆಯಲ್ಲೂ ಕ್ರಷರ್ ವಾದ-ಪ್ರತಿವಾದ: ಶಿವಲಿಂಗೇಗೌಡ- ಎ.ಮಂಜು ನಡುವೆ ವಾಗ್ವಾದ

ಕೆಡಿಪಿ ಸಭೆಯಲ್ಲೂ ಕ್ರಷರ್ ವಾದ-ಪ್ರತಿವಾದ: ಶಿವಲಿಂಗೇಗೌಡ- ಎ.ಮಂಜು ನಡುವೆ ವಾಗ್ವಾದ
Published on

ಹಾಸನ: ಜಿಲ್ಲೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಚೇರಿಗೆ ಮಧ್ಯಾಹ್ನ 12 ಗಂಟೆಗೆ ಬಂದು ಸಂಜೆ 4 ಗಂಟೆಗೆ ಹೋಗುತ್ತಾರೆ. ಬೆಂಗಳೂರು, ಮೈಸೂರಿನಲ್ಲಿ ಮನೆ ಮಾಡಿಕೊಂಡು ಸಂಬಳಕ್ಕಾಗಿ ಮಾತ್ರ ಹಾಸನಕ್ಕೆ ಬರುತ್ತಿರುವ ಅಧಿಕಾರಿಗಳು ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಂಭಾಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆದ ನೇ ತೈಮಾಸಿಕ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ರೀತಿ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಲಕ್ಷೃ ಮಾಡಿದ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕ್ರಷರ್ ಮಾಲೀಕರಿಂದ ರಾಜಧನ ಸಂದಾಯ ವಿಚಾರದಲ್ಲಿ ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ ಎಂಬ ವಿಚಾರವಾಗಿ ಮಾಜಿ ಸಚಿವ ಎ.ಮಂಜು ಹಾಗು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ನಡುವಿನ ವಾಕ್ಸಮರ ವಿಕೋಪಕ್ಕೆ ತಿರುಗಿದ ಪ್ರಸಂಗಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣ ಸಾಕ್ಷಿಯಾಯಿತು.
ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿ, ಅರಕಲಗೂಡು ತಾಲೂಕಿನಲ್ಲಿ ಇತ್ತೀಚೆಗೆ 720 ಚೀಲ ಯೂರಿಯಾ ರಸಗೊಬ್ಬರ ಅಕ್ರಮವಾಗಿ ಸಾಗಾಟವಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಯಾರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಅವರು ಮಾತನಾಡಿ, ರಸಗೊಬ್ಬರ ಸಾಗಿಸುತ್ತಿದ್ದ ಲಾರಿ ಹಾಗು ಚಾಲಕನನ್ನು ವಶಕ್ಕೆ ಪಡೆದಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಸಭೆ ನಡೆಯುವಾಗ ಬಂದ ಶಾಸಕ ಎಚ್.ಡಿ. ರೇವಣ್ಣ ಆಗಮಿಸಿದಾಗ ಸಚಿವ ರಾಜಣ್ಣ, ರೇವಣ್ಣ ದರ್ಬಾರ್‌ನಲ್ಲಿ ಗೊಬ್ಬರ ಅಕ್ರಮವಾಗಿ ಮಾರಾಟ ಆಗುತ್ತಿರುವುದು ಹೇಗೆ ರೇವಣ್ಣ ಅವರ ಕಾಲೆಳೆದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಬಿಎಸ್ ಸಿ ಎಜಿ ಹೆಸರಿನಲ್ಲಿ ಪರ್ಮಿಟ್ ಪಡೆದು ಮಾರಾಟದ ದಂಧೆಯಾಗಿದೆ. ತರಭೇತಿ ಆದವರಿಗೆ ಮಾತ್ರ ಪರವಾನಗಿ ಕೊಟ್ಟರೆ ಉತ್ತಮ. ಶೇ. 75 ಕೋಅಪರೇಟಿವ್ ಹಾಕಿ. ಶೇ. 25 ಖಾಸಗಿಗೆ ಸರಬರಾಜು ಮಾಡಿ ಎಂದರು.
ಆಗ ಮಧ್ಯ ಪ್ರವೇಶಿಸಿದ ಅರಕಲಗೂಡು ಶಾಸಕ ಎ.ಮಂಜು ಅವರು, 2017ರಿಂದಲೂ ತಾಲೂಕಿನಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಲೇ ಇದೆ. ಇದರ ಜತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂದಾಯವಾಗಬೇಕಿರುವ ನೂರಾರು ಕೋಟಿ ರೂ. ರಾಜಧನ ಪಾವತಿಯಾಗಿಲ್ಲ. ಯಾರೂ ಇನ್ನು ಹಣ ಕಟ್ಟಿಲ್ಲ ಅವರ ಹೆಸರು ಘೋಷಿಸುವಂತೆ ಅಧಿಕಾರಿಗಳಿಗೆ ಕೇಳಿದರು. ಆಗ ಆಕ್ರೋಶಗೊಂಡ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ‘ಎಲ್ಲೇ ಹೋದ್ರು ಇದೊಂದು ವಿಚಾರ ಪ್ರಸ್ತಾಪ ಮಾಡುತ್ತೀರಿ. ನನ್ನ ಹೆಂಡ್ತಿ ಹೆಸರಿನಲ್ಲೂ ಕ್ರಷರ್ ಇದೆ. ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತೀದ್ದೀರಿ. ಯಾರು ಯಾರು ರಾಜಧನ ಕಟ್ಟಿಲ್ಲ ಎಂಬುದರ ಪಟ್ಟಿ ಬಹಿರಂಗಪಡಿಸಿ,’ ಎಂದು ಆಗ್ರಹಿಸಿದರು. ಆಗ ಮಾತನಾಡಿದ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರು, ‘ನೀವ್ಯಾಕೆ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೀರಿ. ತಪ್ಪಿತಸ್ಥರು ಯಾರು ಇದ್ದಾರೋ ಅವರ ಹೆಸರು ಎಲ್ಲರಿಗೂ ತಿಳಿಯಲಿ ಬಿಡಿ,’ ಎಂದರು.
ಮತ್ತೆ ಮಾತಾಡಿದ ಕೆ.ಎಂ.ಶಿವಲಿಂಗೇಗೌಡ ಅವರು, ‘ಪಕ್ಕದಲ್ಲಿ ಕುಳಿತು ಹೀಗೆ ಮಾತಾಡು ಅಂತ ಕಿವಿಯಲ್ಲಿ ಪಿಸುಗುಡುವುದನ್ನು ಮೊದಲು ಬಿಡಿ,’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರತ್ತ ಬೊಟ್ಟು ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಸಚಿವ ರಾಜಣ್ಣ ಅವರು ಇಬ್ಬರನ್ನೂ ಸಮಾಧಾನಪಡಿಸಿದರು. ಆದರೂ ಶಿವಲಿಂಗೇಗೌಡರು ಮಾತು ನಿಲ್ಲಿಸದ ಕಾರಣ, ಸಚಿವರು ಸಭೆಯಿಂದ ನಾನೇ ಹೋಗ್ತಿನಿ ನೀನೆ ಮಾಡ್ಕೋಳಪ್ಪ ಎಂದು ಕುರ್ಚಿಯಿಂದ ಮೇಲೆದ್ದರು. ಆಗ ಎಲ್ಲರೂ ಸಮಾಧಾನವಾದರು.

2023-24ನೇ ಸಾಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ 609 ಸೀಟುಗಳನ್ನು ಬೇಕಾಬಿಟ್ಟಿಯಾಗಿ ನೀಡಲಾಗಿದೆ. ಬಡ ಹಾಗು ಪ್ರತಿಭಾವಂತ ಮಕ್ಕಳನ್ನು ಬಿಟ್ಟು ತಮಗೆ ಬೇಕಾದವರಿಗೆ ನೀಡಲಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ತಬಿಜುಲ್ ಹುಸೇನ್ ಅವರಿಗೆ ಕೇಳಿದರು. ಆದರೆ ಇದಕ್ಕೆ ಶಿವಲಿಂಗೇಗೌಡ ಅವರು ಅವಕಾಶ ಮಾಡಿಕೊಡಲಿಲ್ಲ. ಅಧಿಕಾರಿಗಳನ್ನು ಹೆದರಿಸುವುದೇ ನಿಮ್ಮ ಕೆಲಸ ಆಗಿದೆ. ಯಾರೇ ತಪ್ಪು ಮಾಡಿದರೂ ಅಂತಹವರಿಗೆ ಶಿಕ್ಷೆ ಕೊಡಿ. ಎಂಎಲ್‌ಎ, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಸೇರಿ ಎಲ್ಲರ ಶಿಫಾರಸ್ಸು ಹಾಸ್ಟೆಲ್ ಸೀಟ್‌ಗೆ ಬಂದಿವೆ. ಅಧಿಕಾರಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಅವರನ್ನು ಭಯದಲ್ಲಿರಿಸಲು ಈ ರೀತಿ ಅಪರಾಧ ಸ್ಥಾನದಲ್ಲಿ ನಿಲ್ಲಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಆಗ ಮಾತನಾಡಿದ ಸಚಿವ ರಾಜಣ್ಣ ಅವರು, 609 ಸೀಟು ಭರ್ತಿಯಲ್ಲಿ ಲೋಪ ಎಸಗಲಾಗಿದೆ ಅಂತ ರೇವಣ್ಣ ಅವರು ಆರೋಪಿಸುತ್ತಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿ ಪ್ರಭಾವದಿಂದ ಪ್ರವೇಶ ಪಡೆದಿರುವ ಪ್ರಕರಣಗಳಿದ್ದರೆ ಅದನ್ನು ರದ್ದುಪಡಿಸಿ ಅರ್ಹರಿಗೆ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿ 569 ಸರ್ಕಾರಿ ಶಾಲೆಗಳ 1020 ಕೊಠಡಿಗಳು ದುರಸ್ತಿ ಆಗಬೇಕಿದ್ದು, 18.40 ಕೋಟಿ ರೂ. ಅವಶ್ಯಕತೆಯಿದೆ ಎಂದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಎಚ್.ಕೆ.ಸುರೇಶ್ ಅವರು ಮಾತನಾಡಿ, ಸಿಎಸ್‌ಆರ್ ಅನುದಾನದಡಿ ಕಟ್ಟಡಗಳ ದುರಸ್ತಿ ಮಾಡಬೇಕು. ಆದರೆ, ಯಾವ ಕಾರ್ಖಾನೆಯವರು ಸಿಎಸ್‌ಆರ್ ಫಂಡ್ ನೀಡಲು ಮುಂದೆ ಬರುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಎಲ್ಲಾ ಕಾರ್ಖಾನೆ ಮಾಲೀಕರ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಮಾತನಾಡಿ, ತಾಲೂಕಿನಲ್ಲಿ ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳು ಇಲ್ಲಸಲ್ಲದ ನೆಪವೊಡ್ಡುತ್ತಿದ್ದು, ಕಾನೂನು ಸರಳೀಕರಣಗೊಳಿಸಬೇಕು. ಸಕಲೇಶಪುರದಲ್ಲೇ ಹೇಮಾವತಿ ನದಿ ಹರಿದರೂ ಅರ್ಧ ಹಿಡಿ ಮರಳು ಸಿಗುತ್ತಿಲ್ಲ. ಮರಳು ಸಿಗದೆ ಬಡವರೂ ಮನೆ ಕಟ್ಟಲು ಆಗುತ್ತಿಲ್ಲ. ಇಟ್ಟಿಗೆ ಕಾರ್ಖಾನೆಯವರಿಗೂ ತೊಂದರೆಯಾಗುತ್ತಿದೆ. ಪೊಲೀಸರು ಬಡವರನ್ನು ಬಿಡದೆ ಕೇಸು ಹಾಕುತ್ತಿದ್ದಾರೆ ಎಂದರು.ಶಾಸಕ ಎಚ್.ಪಿ.ಸ್ವರೂಪ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಪರಪ್ಪಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net