ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿಗಳು

20230828_155447
Published on

ಮೈಸೂರು: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ‘ವಿಜಯವಾಣಿ’ ವರದಿಗಳು ಪ್ರತಿಧ್ವನಿಸಿತು.
ಶೈಕ್ಷಣಿಕ ಮಟ್ಟದ ಪ್ರಗತಿ ಸಮಯದಲ್ಲಿ ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡಿದ್ದ 26 ಶಾಲೆಗಳಲ್ಲಿ ಶೂನ್ಯ ದಾಖಲೆ ವಿಶೇಷ ವರದಿಯನ್ನು ಪ್ರದರ್ಶಿಸಿ, ಶಾಲೆ ಮುಚ್ಚಲು ಅಧಿಕಾರಿಗಳ ನಿರ್ಲಕ್ಷ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳೆ ದಾಖಲೆ ಆಗದಿರುವುದಕ್ಕೆ ಕಾರಣ ಏನು?. ಅಂತಹ ಶಾಲೆಗೆ ತೆರಳಿ ಪೋಷಕರೊಂದಿಗೆ ಮಾತುಕತೆ ನಡೆಸಲಾಗಿದೆಯೇ, ಮತ್ತೆ ಶಾಲೆಗೆ ಸೇರಿಸಲು ಯಾವ ಕ್ರಮಕೈಗೊಂಡಿದ್ದೀರಾ ಎಂದು ಡಿಡಿಪಿಐ ಪಾಂಡು ಅವರನ್ನು ಪ್ರಶ್ನಿಸಿದರು.
ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಒತ್ತು ನೀಡುತ್ತಿರುವುದರಿಂದ ಶಾಲೆಗಳಿಗೆ ದಾಖಲಾಗಿಲ್ಲ. 46 ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮವಾಗಿ ಪರಿವರ್ತಿಸುವಂತೆ ಬೇಡಿಕೆ ಬಂದಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು.
ಆದರೆ ಇದನ್ನು ಒಪ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಂಗ್ಲ ಮಾಧ್ಯಮ ಒಂದೇ ಕಾರಣ ಅಲ್ಲ. ಬೇರೆ ಏನಾದರೂ ಸಮಸ್ಯೆ ಇರುತ್ತದೆ. ಮನೆ, ಮನೆಗೆ ಭೇಟಿ ನೀಡಿ ವಾಸ್ತವವನ್ನು ತಿಳಿದು ನನಗೆ ವರದಿ ಸಲ್ಲಿಸಬೇಕು. ಯಾವ ವಿದ್ಯಾರ್ಥಿಯೂ ಶಾಲೆಯಿಂದ ಹೊರಗೆ ಉಳಿಯಬಾರದು. ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ರಾಜಪ್ಪ ಮಾಸ್ತರು ಮನೆಗೆ ಬಂದು ಶಾಲೆಗೆ ಸೇರಿಸದಿದ್ದರೆ ಶಿಕ್ಷಣದಿಂದ ವಂಚಿತಗಾಗಬೇಕಾಗಿತ್ತು. ಮುಖ್ಯಮಂತ್ರಿಯೂ ಅಗಿತ್ತಿರಲಿಲ್ಲ ಎಂದರು.
ಆರೋಗ್ಯ ಸೇವೆಯಲ್ಲಿ ಜಿಲ್ಲೆಯ ರೇಟಿಂಗ್ ಸ್ಥಾನದ ಕುರಿತು ‘ವಿಜಯವಾಣಿ’ ವರದಿ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಪ್ರತಿ ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯದ ಸಮಯದಲ್ಲಿ ಇರಬೇಕು, ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ, ಅಲ್ಟ್ರಾಸೌಂಡ್, ಎಕ್ಸ್‌ರೇ ಸೇರಿದಂತೆ ಎಲ್ಲ ಸೌಲಭ್ಯ ನೀಡಲು ಕ್ರಮಕೈಗೊಂಡಿದ್ದು, ಅಧಿಕಾರಿಗಳು ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net