

ಚಾಮರಾಜನಗರ: ಇಬ್ಬರು ಸಚಿವದ್ವಯರ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶು ಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯ ಆರಂಭದಲ್ಲಿ ಸಚಿವ ಕೆ.ವೆಂಕಟೇಶ್ ಕೃಷಿ ಇಲಾಖೆ ಅಧಿಕಾರಿಗಳಿಂದ ಬೆಳೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ಈ ವೇಳೆ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅಕ್ಷರ ದಾಸೋಹಕ್ಕೆ ವಿತರಣೆ ಮಾಡಿರುವ ಕಳಪೆ ಆಹಾರವನ್ನು ಪ್ರದರ್ಶನ ಮಾಡಿದರು. ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವ ಸಮಿತಿಯಲ್ಲಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ್ ವಿವರಣೆ ನೀಡಿ, ಬೆಳೆ ವಿತರಣೆಯಾಗಿ ಎರಡ್ಮೂರು ತಿಂಗಳು ಕಳೆದಿವೆ ಎಂದು ಉತ್ತರಿಸಿದರು. ಸಚಿವ ಕೆ.ವೆಂಕಟೇಶ್ ಕೋಪಗೊಂಡು ಯೋಗಾನಂದ್‌ಗೆ ರೇಗಿದರು. ಬಾಯಿಗೆ ಬಂದ ಹಾಗೆ ಬೊಗಳಬೇಡಿ, ಕಣ್ಣಿಗೆ ಕಾಣುತ್ತಿಲ್ಲವಾ? ಎಂದು ಪ್ರಶ್ನೆ ಮಾಡಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಧ್ಯ ಪ್ರವೇಶಿಸಿ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅವರಿಂದ ತನಿಖೆ ನಡೆಸುವುದಾಗಿ ತಿಳಿಸಿದರು.
ಈ ವೇಳೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಶಾಲಾ ಶಿಕ್ಷಕರು ಇದನ್ನು ಗಮನಕ್ಕೆ ತರುವುದು ಸೂಕ್ತ ಎಂದು ಸಲಹೆ ನೀಡಿದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಂಗನವಾಡಿಗಳಲ್ಲಿ ಅಪೌಷ್ಟಿಕ ಆಹಾರ ವಿತರಣೆಯಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರತಿಕ್ರಿಯಿಸಿ, ನಾವು ನಿಗದಿತವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ಕಳಪೆ ಆಹಾರ ವಿತರಣೆಯಾಗುತ್ತಿಲ್ಲ ಎಂದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಸೆಂಬ್ಲಿಗಾಗಿ ನೀವು ನೀಡಿರುವ ಮಾಹಿತಿ ಪ್ರಕಾರ, ಕಳಪೆ ಆಹಾರ ವಿತರಣೆಯಾಗಿದೆ ಎಂದು ಮಾಹಿತಿ ನೀಡಿದ್ದೀರಿ. ಈ ಕುರಿತು ನಿಮ್ಮ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು ಹಾಸ್ಟೆಲ್‌ಗಳ ಕುರಿತು ಮಾಹಿತಿ ನೀಡಿದರು. ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ಅಧಿಕಾರಿಗಳು ಭೇಟಿ ನೀಡಬೇಕೆಂದು ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದರು. ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವ ಕುರಿತು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ) ಇದ್ದರು.
ಸಂಹಿತೆ ಬೋಧಿಸಿದ ಶಾಸಕ:
ಸಭೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸಂಹಿತೆ ಬೋಧಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಚೂಡಿದಾರ್ ಹಾಕಿಕೊಂಡು ಸಭೆಗೆ ಬಂದಿದ್ದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನೀವೆಲ್ಲ ನಮ್ಮ ಅಕ್ಕ-ತಂಗಿ, ಅಣ್ಣ-ತಮ್ಮನ ಹಾಗೆ. ಮಹಿಳಾ ಅಧಿಕಾರಿಗಳು ಸೀರೆ ಧರಿಸಿಕೊಂಡು ಬನ್ನಿ. ಪುರುಷ ಅಧಿಕಾರಿಗಳು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿ ಎಂದು ಸಲಹೆ ನೀಡಿದರು. ಬಳಿಕ ಆಶ್ರಮ ಶಾಲೆಗಳ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಆಶ್ರಮ ಶಾಲೆಗಳಲ್ಲಿ ಸಂಜೆ ಮೇಲೆ ಮಕ್ಕಳೇ ಇರುವುದಿಲ್ಲ. ಶಿಕ್ಷಕರೂ ಶಾಲೆಗೆ ಬಾಗಿಲು ಹಾಕಿಕೊಂಡು ಹೋಗುತ್ತಾರೆ. ಈ ಕುರಿತು ಪರಿಶೀಲನೆ ನಡೆಸಿ ಎಂದು ಸೂಚನೆ ನೀಡಿದರು. ಸೋಲಿಗರಿಗೆ ಮನೆಗಳಿಲ್ಲ ಎಂಬ ಬಗ್ಗೆ ಬಿಂದ್ಯಾ ಮಾಹಿತಿ ನೀಡಿ ಜಿಲ್ಲೆಯಲ್ಲಿ 2995 ಮನೆಗಳು ಬೇಕು. 243 ಕುಟುಂಬಗಳಿಗೆ ಜಾಗವೇ ಇಲ್ಲ ಎಂದು ವಿವರಿಸಿದರು.
ಶೆಟ್ರು ಮತ್ತು ಎಆರ್‌ಕೆ ನಡುವೆ ವಾಗ್ವಾದ:
ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಎ.ಆರ್.ಕೃಷ್ಣಮೂರ್ತಿ ನಡುವೆ ವಾಗ್ವಾದ ನಡೆಯಿತು. ವಿವಿಧ ಸಮಸ್ಯೆಗಳ ಕುರಿತು ಎಆರ್‌ಕೆ ವಿಸ್ತೃತವಾಗಿ ಚರ್ಚೆ ನಡೆಸುತ್ತಿದ್ದರು. ಅಧಿಕಾರಿಗಳನ್ನು ಪ್ರಶ್ನಿಸಿ ಪ್ರಗತಿಗೆ ಹಿನ್ನಡೆಯುಂಟಾಗಿರುವುದಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಎಆರ್‌ಕೆ ಮತ್ತು ಅಧಿಕಾರಿಗಳ ನಡುವಿನ ಸಂಭಾಷಣೆ ಸಮಯ ಸಭೆಯನ್ನು ದೀರ್ಘವಾಗಿ ಕೊಂಡೊಯ್ಯುತ್ತಿತ್ತು. ಆಗ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಧ್ಯ ಪ್ರವೇಶಿಸಿ ನೀವೇ ಹೆಚ್ಚು ಮಾತನಾಡುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಂತೆಯೇ ಸಚಿವ ಕೆ.ವೆಂಕಟೇಶ್ ಮಧ್ಯಪ್ರವೇಶ ಮಾಡಿ ಸುಮ್ಮನಾಗಿಸಿದರು.
ಎಚ್‌ಸಿಎಂ ಭಾಗಿ:
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಭೆಯಲ್ಲಿ ಭಾಗವಹಿಸಿದರು. ನೀರಾವರಿ ಸಮಸ್ಯೆಗೆ ಸಂಬಂಧಿಸಿದಂತೆ ಸಭೆಗೆ ಆಗಮಿಸದ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೂ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಿದರು.