ಕೆಡಿಪಿ ಸಭೆ ನಡೆಯದೆ, ಅಭಿವೃದ್ಧಿ ಕುಂಠಿತ

Published on

ಬಳ್ಳಾರಿ : ಜಿಲ್ಲೆಯಲ್ಲಿ ಅಭಿವೃದ್ದಿ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಡಿದ್ದೆ ಆಟ ಎಂಬಂತೆ ಆಗಿದೆ. ನಿಗದಿತ ವೇಳೆಗೆ ಕೆಡಿಪಿ ಸಭೆ ನಡೆಸಿ ಆಡಳಿತ ವರ್ಗದ ಕಿವಿ ಹಿಂಡಿ ಕೆಲಸ ಮಾಡಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷತನದಿಂದ ವಿವಿಧ ಅಭಿವೃದ್ಧಿಗಳು ಹಿನ್ನಡೆಯಾಗಿವೆ.
ಗಡಿನಾಡು ಬಳ್ಳಾರಿಯು ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಯಿಂದ ರಾಜ್ಯವಲ್ಲದೆ ದೇಶದಲ್ಲಿ ಗಮನ ಸೆಳೆದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿವಿಧ ಕಾಮಗಾರಿಗಳು ಕುಂಠಿತಗೊಳ್ಳುವ ಮೂಲಕ ನಾಗರಿಕರ ಅಕ್ರೋಶಕ್ಕೆ ಕಾರಣವಾಗಿದೆ. ಸಮರ್ಪಕವಾಗಿ ಕೆಲಸ ಮಾಡಿಸಬೇಕಿದೆ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಖಾನ್ ಜಿಲ್ಲೆಯಲ್ಲಿ ನೆಲೆ ನಿಂತು ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಕಾಟಚಾರಕ್ಕೆ ಎಂಬಂತೆ ಭಾಗವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಭೆ ಮುಂದೂಡಿಕೆ : ಶಾಸಕ ಬಿ. ನಾಗೇಂದ್ರ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ, ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್‌ನಲ್ಲಿ ಕೆಡಿಪಿ ಸಭೆ ನಡೆದಿತ್ತು. ನಂತರ ವಾಲ್ಮೀಕಿ ಅಭಿವೃದ್ಧಿ ನಿಗಮದ ಆರೋಪದಡಿ ಜೈಲು ಸೇರಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಆಗಿ ಜಮೀರ್ ಅಹ್ಮದ್‌ಗೆ ವಹಿಸಲಾಗಿತ್ತು. ತದನಂತರ ಜುಲೈ ನಲ್ಲಿ ನಿಗದಿ ಮಾಡಿದ್ದ ಸಭೆಯನ್ನು ವಿವಿಧ ಕಾರಣದಿಂದ ಆ. 17ಕ್ಕೆ ಮುಂದೂಡಲಾಯಿತು. ಆ. 17ರಂದು ಬೆಳಗ್ಗೆ ಜನತಾ ದರ್ಶನ ಮಧ್ಯಾಹ್ನ ಕೆಡಿಪಿ ಸಭೆಯ ಆಯೋಜಿಸಲಾಗಿತ್ತು. ಆದರೆ, ರಾಜ್ಯಪಾಲರ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ತರಾತುರಿಯಲ್ಲಿ ಜನತಾ ದರ್ಶನ ಮುಗಿಸಿ, ಕೆಡಿಪಿ ಸಭೆಯನ್ನು ಮತ್ತೊಮ್ಮೆ ಮುಂದೂಡಲಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಸಭೆಯನ್ನು ಕಲಬುರಗಿ ನಡೆದ ಸಚಿವ ಸಂಪುಟ ಸಭೆ ಹಿನ್ನೆಲೆ ಅಕ್ಟೋಬರ್‌ಗೆ ಮುಂದೂಡಿದೆ. ಅಲ್ಲದೆ, ಇತ್ತೀಚೆಗೆ ಸಂಸದರ ಅಧ್ಯಕ್ಷತೆ ನಡೆದ ದಿಶಾ ಸಭೆಗೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಗೈರಾಗಿದ್ದರು. ಸಭೆ ನಡೆಸಿ ಅಧಿಕಾರಿಗಳಿಗೆ ಚಾಟಿ ಬೀಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸದೆ ನಾಮಕ ವ್ಯವಸ್ಥೆಗೆ ಮಾತ್ರ ಸಚಿವರು ಆಗಿದ್ದಾರೆ ಎಂಬುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಅಭಿವೃದ್ಧಿ ಹಿನ್ನಡೆ : ಜಿಲ್ಲೆಯಲ್ಲಿ ಸಕಾಲಕ್ಕೆ ಹಳ್ಳಿಗಳಿಗೆ ಬಸ್ ಸೌಲಭ್ಯ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈತರಿಗೆ ವಿಮೆ ಹಣ ಪಾವತಿಯಾಗುತ್ತಿಲ್ಲ. ಇತ್ತೀಚೆಗೆ ದುಬಾರಿ ದರದಲ್ಲಿ ಬಿತ್ತನೆ ಬೀಜ ಮಾರಾಟ ಹಾಗೂ ರಾಸಯನಿಕ ಕ್ರಿಮಿನಾಶಕಗಳು ದುಬಾರಿ ಬೆಲೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ. ಜಿಲ್ಲೆಯ ವಿಮ್ಸ್, ಟ್ರಾಮ್ ಕೇರ್, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಗದಿತ ಸಮಯದಲ್ಲಿ ವೈದ್ಯರು ಕಾರ್ಯ ನಿರ್ವಹಿಸದೆ ಇರುವುದರಿಂದ ರೋಗಿಗಳು ಸಂಕಷ್ಟ ಪಡುತ್ತಿದ್ದಾರೆ. ಅಲ್ಲದೆ, ಸ್ವಚ್ಛತೆಗೆ ಅದ್ಯತೆ ನೀಡಬೇಕಿದ್ದ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಜಿಲ್ಲೆಯ ಎಲ್ಲ ಹಳ್ಳಿಗಳ ರಸ್ತೆಗಳು ಹಲವು ವರ್ಷಗಳಿಂದ ದುರಸ್ತಿ ಕಾರ್ಯ ನಡೆಯದೆ ಇರುವುದರಿಂದ ಸಂಚಾರ ದುಸ್ತಾರವಾಗಿದೆ. ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಚಾರ ನಡೆದರೂ, ಯಾರು ನಮ್ಮನ್ನು ಕೇಳುವುದು ಎಂಬಂತೆ ಅಧಿಕಾರಿಗಳು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ನಿರ್ಮಾಣವಾಗಬೇಕಿದ್ದ ಮೆಣಸಿನ ಕಾಯಿ ಮಾರುಕಟ್ಟೆ, ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ರಿಂಗ್ ರಸ್ತೆ, ಹೊಸಪೇಟೆ ಎನ್‌ಎಚ್ ರಸ್ತೆ, ವಿಮಾನ ನಿಲ್ದಾಣ, ಜೀನ್ಸ್ ಅಪೆರೆಲ್ ಪಾರ್ಕ್, ನಗರದ ಟ್ರಾಫಿಕ್ ಸಮಸ್ಯೆ, ಗಡಗಿ ಚೆನ್ನಪ್ಪ ವೃತ್ತದ ಗಡಿಯಾರ ಕಂಬ, ದುರ್ಗಮ್ಮ ವೃತ್ತದ ರೈಲ್ವೆ ಕೆಳ ಸೇತುವೆ ಅಗಲೀಕರಣ, ಕುಡಿಯುವ ನೀರು, ಶಾಲೆಗಳಲ್ಲಿ ಕೊಠಡಿಗಳ ಕೊರತೆ, ಕೊನೆಯ ಭಾಗದ ರೈತರಿಗೆ ತಲುಪದ ಎಲ್‌ಎಲ್‌ಸಿ ಕಾಲುವೆ ನೀರು ಸೇರಿದಂತೆ ಹಲವು ವಿಷಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿತ ಸಮಯಕ್ಕೆ ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ ಕಾಮಗಾರಿಗಳು ಪೂರ್ಣಗೊಳ್ಳುವುದು ಎಂಬುದು ಜನರ ಅಭಿಪ್ರಾಯವಾಗಿದೆ.

ಕೋಟ್… ಸೆಪ್ಟೆಂಬರ್ ತಿಂಗಳಿನಲ್ಲಿ ಕೆಡಿಪಿ ಸಭೆ ನಡೆಯಬೇಕಿತ್ತು. ಆದರೆ, ಕಲಬುರಗಿ ಸಚಿವ ಸಂಪುಟ ನಿಗದಿಯಾಗಿದ್ದರಿಂದ ಸಭೆಯನ್ನು ಅಕ್ಟೋಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ.

  • ಪ್ರಶಾಂತ ಕುಮಾರ ಮಿಶ್ರಾ, ಡಿಸಿ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net