

ಚಿಕ್ಕಮಗಳೂರು: ಶೋಷಿತರು, ಹಿಂದುಳಿದ ವರ್ಗದವರಿಗೆ ಜಿಲ್ಲಾ ಸಂಘಟನೆ ನ್ಯಾಯ ಬದ್ಧವಾಗಿ ನಿಲ್ಲಬೇಕು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವಲ್ಲಿ ಸತತವಾಗಿ ಪ್ರಯತ್ನಿಸಬೇಕು ಎಂದು ಡಿಎಸ್‌ಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ಎಲ್.ಸಿ.ವಸಂತಕುಮಾರಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಸಭೆ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಆಶಯದಂತೆ ಜಿಲ್ಲಾ ಪದಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಸಮಾಜದಲ್ಲಿನ ಕೆಟ್ಟ ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತಿ ಪ್ರಶ್ನಿಸುವ ಮನೋಭಾವ ಮೂಡಿದಾಗ ಮಾತ್ರ ಸಂಘಟನೆ ಹುಟ್ಟಿ ಹಾಕಿರುವುದಕ್ಕೆ ಸಾರ್ಥಕವಾದಂತಾಗುತ್ತದೆ ಎಂದರು.
ಸAಘಟನಾತ್ಮಕ ದೃಷ್ಟಿಯಿಂದ ಜಿಲ್ಲೆಗೆ ಉತ್ತಮ ನಾಯಕತ್ವ ಲಭಿಸಿದೆ. ಸುಂದ್ರೇಶ್ ಹೊಯ್ಸಳಲು ನೇತೃತ್ವದಲ್ಲಿ ಕಾರ್ಯಚಟುವಟಿಕೆ ರೂಪಿಸಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪದಾಧಿಕಾರಿಗಳನ್ನು ನೇಮಿಸಿ ಸ್ಥಳೀಯ ಸಮಸ್ಯೆಗಳ ವಿರುದ್ಧ ನ್ಯಾಯಸಮ್ಮತವಾಗಿ ಹೋರಾಟ ರೂಪಿಸುವ ಚೈತನ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸದ್ಯದಲ್ಲೇ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆಯಿದೆ. ಹೀಗಾಗಿ ಪದಾಧಿಕಾರಿಗಳು ಅತ್ಯಂತ ಚುರುಕಿನಿಂದ ಕೆಲಸ ನಿರ್ವಹಿಸಬೇಕು. ನವಜೋಡಿಗಳ ಆಯ್ಕೆ ವಿಚಾರದಲ್ಲಿ ಗಂಭೀರವಾಗಿ ಆಲೋಚಿಸಿ ರಾಜ್ಯ ಸಮಿತಿಯ ಗಮನಕ್ಕೆ ತರಬೇಕಿದೆ ಎಂದು ತಿಳಿಸಿದರು.
ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಸಂಘಟನೆಯಿAದ ಬಡವರಿಗೆ ಅನುಕೂಲವಾಗಿ ಜನಪರ ಕೆಲಸ ಹಮ್ಮಿಕೊಂಡ ಕಾರಣ ಅನೇಕ ಗ್ರಾಮಗಳಲ್ಲಿ ಸಂಘಟನೆ ಮನೆಮಾತಾಗಿದೆ. ಹಲವು ಕಾರ್ಯಕರ್ತರು, ಗ್ರಾಮದ ಸ್ಥಳೀಯರು ಸಂಘಟನೆಗೆ ಕೈಜೋಡಿಸಿದ ಪರಿಣಾಮ ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ರಾಜ್‌ಶಂಕರ್, ಪದಾಧಿಕಾರಿಗಳು ಚಟುವಟಿಕೆಯಿಂದ ಕೂಡಿರಬೇ ಕು. ಅನ್ಯಾಯ ಕಂಡಲ್ಲಿ ತ್ವರಿತವಾಗಿ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಡಿಎಸ್‌ಎಸ್ ರಾಜ್ಯ ಘಟಕದಿಂದ ನೀಡಿರುವ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಿಎಸ್‌ಎಸ್ ಮೂಡಿಗೆರೆ ಅಧ್ಯಕ್ಷ ಪೂರ್ಣೇಶ್, ಮುಖಂಡರಾದ ಚಂದ್ರಶೇಖರ್, ಇಂದ್ರೇಶ್, ರಾಜು, ಶಿವು, ಜಯಮ್ಮ, ರಾಜಣ್ಣ, ವಸಂತಕುಮಾರ್ ಉಪಸ್ಥಿತರಿದ್ದರು.