ಕೆಟ್ಟ ಆಲೋಚನೆಗಳಿಂದ ದೂರವಿರಿ:ಡಾ.ಕೆ.ಎಸ್.ಸುನೀತಾ

ಕೆಟ್ಟ ಆಲೋಚನೆಗಳಿಂದ ದೂರವಿರಿ:ಡಾ.ಕೆ.ಎಸ್.ಸುನೀತಾ
Published on

ಹಾಸನ: ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದರ ಕಡೆಗೆ ನಾವು ಗಮನ ಹರಿಸಬೇಕು. ಕೆಟ್ಟ ಆಲೋಚನೆಗಳು ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು. ಮನಸ್ಸು ಗೊಂದಲವಾಗದೆ ಒತ್ತಡಕ್ಕೆ ಒಳಗಾಗಿ ಜೀವನ ನಡೆಸುವುದು ಕಷ್ಟವಾಗಲಿದೆ ಎಂದು ಹಿಮ್ಸ್‌ನ ಮಾನಸಿಕ ಆರೋಗ್ಯ ತಜ್ಞರಾದ ಡಾ.ಕೆ.ಎಸ್.ಸುನೀತಾ ತಿಳಿಸಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಮಸ್ಯೆಗಳನ್ನು ಎದುರಿಸುವ ಸವಾಲುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಹಾಗೆಯೇ ಹಿಡಿದ ಕೆಲಸವನ್ನು ಮಾಡಿದಾಗ ಮನಸ್ಸಿಗೆ ಸಂತೃಪ್ತ ಭಾವನೆ ಸಿಗುತ್ತದೆ. ಆಗ ನಾವು ಸಂತೋಷದಿಂದ ಇರಬಹುದು ಎಂದು ಸಲಹೆ ನೀಡಿದರು.
ಇಂದು ನಾವು ಯೋಗ, ಪ್ರಾಣಾಯಾಮ ಧ್ಯಾನ ಮಾಡುವುದು ಅಗತ್ಯವಾಗಿದೆ. ಇದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ನಕಾರಾತ್ಮಕ ಅಲೋಚನೆ ಮಾಡದೆ ಕಲಿಕೆಯ ಕಡೆಗೆ ಗಮನ ನೀಡಬೇಕು. ಮನಸ್ಸನ್ನು ಕೆಡುಕಗಳ ಕಡೆಗೆ ಹೆಚ್ಚು ಕೇಂದ್ರೀಕರಿಸದೆ ಉತ್ತಮ ಅಲೋಚನೆ ಮಾಡಿದಾಗ ನಮ್ಮ ಜೀವನ ಸುಖಕರವಾಗಲಿದೆ . ಕೆಟ್ಟ ಚಟಗಳಿಗೆ ಅಂಟಿಕೊಳ್ಳಬಾರದು ಅದರ ಕಡೆಗೆ ಗಮನವನ್ನೇ ನೀಡಬಾರದು. ಆಗ ನಾವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ.ಜೆ. ಕೃಷ್ಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಇತರೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ನಾಗರಿಕರಾಗಬೇಕು. ಹಾಗೂ ಇಂಜಿನಿಯರಿಂಗ್ ಪದವಿ ಪಡೆದ ನಂತರವೂ ಉನ್ನತ ವ್ಯಾಸಂಗ ಮಾಡಬೇಕು. ಐಎಎಸ್, ಐಪಿಎಸ್, ಐಎಫ್‌ಎಸ್ ನಂತಹ ನಾಗರಿಕ ಸೇವಾ ಪರೀಕ್ಷೆಗಳತ್ತ ಗಮನ ಹರಿಸಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಹ ಅಧಿಕಾರಿ ಡಾ ಕಲಾವತಿ, ಪ್ರಾಧ್ಯಾಪಕ ಡಾ. ಮೋಹನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net