

ಕಲಬುರಗಿ: ಮಹಾರಾಷ್ಟçದ ಪುಣಾದಲ್ಲಿ ಕೆಎಸ್‌ಆರ್‌ಟಿಸಿ ಕಲಬುರಗಿ ವಿಭಾಗ-೨ ಆಳಂದ ಘಟಕದ ಬಸ್ ತಡೆದು ಚಾಲಕ ಸಾದಿಖ್ ಮೂಲಗೆ ಅವರ ಮುಖಕ್ಕೆ ಮಸಿ ಬಳೆದು ಹಲ್ಲೆ ಮಾಡಿರುವುದನ್ನು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಕಾರ್ಯಾಧ್ಯಕ್ಷ ಸಿದ್ದಪ್ಪ ಪಾಲ್ಕಿ ಖಂಡಿಸಿದರು.
ಚಾಲಕನಿಗೆ ಮಸಿ ಬಳಿದು, ನಿರ್ವಾಹಕನಿಗೆ ಅವಾಚ್ಯವಾಗಿ ನಿಂದಿಸಿ, ಬಸ್‌ನ ಕನ್ನಡ ಅಕ್ಷರಕ್ಕೆ ಮಸಿ ಬಳೆದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದರೂ ಮಹಾರಾಷ್ಟç ಸರ್ಕಾರ, ಅಲ್ಲಿನ ಪೊಲೀಸರು ಎಂಇಎಸ್ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಕೂಡಲೇ ಕಲಬುರಗಿ ಜಿಲ್ಲಾಡಳಿತ, ಕೆಕೆಆರ್‌ಟಿಸಿ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮಹಾರಾಷ್ಟç ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು, ಎಂಇಎಸ್ ಪುಂಡರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಮಹಾರಾಷ್ಟçದಲ್ಲಿ ಸಂಚರಿಸುವ ಬಸ್, ಚಾಲಕ, ನಿರ್ವಾಹಕರಿಗೆ ಭದ್ರತೆ ಕಲ್ಪಿಸಬೇಕು. ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಫೆಡರೇಷನ್‌ನಿಂದ ದೂರು ನೀಡಲಾಗುವುದು. ಕ್ರಮವಾಗದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ನಾಗಿಂದ್ರಪ್ಪ ಚವ್ಹಾಣ್, ಹನುಮಂತರಾಯ ಅಟ್ಟೂರ, ಬಸವರಾಜ ಕೊರಬಾ, ಮಹ್ಮದ್ ಸಾದಿಖ್, ಶಾಮರಾವ ಪಾಟೀಲ್, ಅಬ್ದುಲ್ ಕಲೀಂ ಇತರರಿದ್ದರು.