ಕೆಐಎಡಿಬಿ ಅಧಿಕಾರಿಗಳಿಗೆ ಶಾಸಕ ಸ್ವರೂಪ್ ತರಾಟೆ

ಕೆಐಎಡಿಬಿ ಅಧಿಕಾರಿಗಳಿಗೆ ಶಾಸಕ ಸ್ವರೂಪ್ ತರಾಟೆ
Published on

ಹಾಸನ: ತಾಲೂಕಿನ ನಾಗತವಳ್ಳಿ ಗ್ರಾಮದ ಸರ್ವೆ ನಂಬರ್ 54 ರಲ್ಲಿ ಪಾರ್ಕ್‌ಗೆ ಮೀಸಲಿಟ್ಟಿದ್ದ ಜಾಗದಲ್ಲಿ ಯಾವುದೇ ಕೆಲಸ ಮಾಡದಂತೆ ಕೆಐಎಡಿಬಿ ತಡೆಯಾಜ್ಞೆ ನೀಡಿದ್ದರೂ ಖಾಸಗಿಯವರಿಗೆ ಕೆಲಸ ಮಾಡಲು ಅವಕಾಶ ನೀಡಿರುವ ಅಧಿಕಾರಿಗಳನ್ನು ಶಾಸಕ ಸ್ವರೂಪ್ ಪ್ರಕಾಶ್ ತರಾಟೆಗೆ ತೆಗೆದುಕೊಂಡರು.
ಕೆಐಎಡಿಬಿ ಅಧಿಕಾರಿಗಳು ಖಾಸಗಿಯವರ ಜತೆ ಶಾಮೀಲಾಗಿ ಜಾಗವನ್ನು ಪುಷ್ಪಗಿರಿ ವೇರ್ ಹೌಸ್ ಮಾಲೀಕರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಲ್ಲದೆ ಇಲಾಖೆಯಿಂದಲೇ ಮುಂದಿನ ಆದೇಶದವರೆಗೂ ಯಾವುದೇ ಕೆಲಸ ಮಾಡಬಾರದು ಎಂಬ ಆದೇಶ ನೀಡಿದ್ದರೂ ಖಾಸಗಿಯವರು ಸ್ಥಳದಲ್ಲಿ ಕೆಲಸ ಮುಂದುವರೆಸಿದ್ದಾರೆ ಎಂದು ಗ್ರಾಮಸ್ಥರು ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ಸ್ವರೂಪ್ ಪ್ರಕಾಶ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಇಲಾಖೆಯಿಂದ ಕೆಲಸ ಮಾಡದಂತೆ ಆದೇಶ ಇದ್ದರೂ ಕೆಲಸ ನಡೆಯಲು ಹೇಗೆ ಬಿಟ್ಟಿದ್ದೀರಿ, ಕೂಡಲೇ ಕೆಲಸ ನಿಲ್ಲಿಸಿ ನ್ಯಾಯಾಲಯದ ಅಥವಾ ಇಲಾಖೆಯ ಮೇಲಧಿಕಾರಿಗಳ ಮುಂದಿನ ಆದೇಶ ಬರುವವರೆಗೂ ಕೆಲಸ ನಡೆಯಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಮದ ಸುನಿಲ್ ಮಾತನಾಡಿ, ಗ್ರಾಮದ ಅನುಕೂಲಕ್ಕೆ ನಗರದ ಕೆಡಿಬಿ ಕೈಗಾರಿಕಾ ಪ್ರದೇಶದ ಸರ್ವೆ ನಂಬರ್ 54 ರಲ್ಲಿ ಎರಡು ಎಕರೆ ಜಾಗವನ್ನು ಪಾರ್ಕ್‌ಗಾಗಿ ಮೀಸಲಿಡಲಾಗಿದೆ. ಆದರೆ ಇದೀಗ ಖಾಸಗಿಯವರ ಪಾಲಾಗಿದೆ. ಈ ಹಿಂದೆಯೂ ಕೂಡ ಪಾರ್ಕ್ ಜಾಗದ ರಕ್ಷಣೆಗಾಗಿ ಹೋರಾಟಗಳು ನಡೆದಿವೆ. ಆದರೆ ಈವರೆಗೆ ಸರ್ಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಕೋರ್ಟ್ ಆದೇಶ ಇದ್ದರೂ ರಜೆ ದಿನಗಳಲ್ಲಿ ಕೆಲಸ ನಡೆಯುತ್ತಿರುವುದು ಖಂಡನೀಯ ಎಂದರು.
ಈ ವೇಳೆ ಗ್ರಾಮದ ಶರತ್, ದೇವರಾಜ್, ಶಿವಣ್ಣ, ಕರಿಯಪ್ಪ, ರವಿ, ರೇಣುಕಾ, ರತ್ನಮ್ಮ, ಕೋಮಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net