

ಹುಬ್ಬಳ್ಳಿ: ತಾಲೂಕಿನ ಬುಡರಸಿಂಗಿಯ ಗೋವರ್ಧನ ಕ್ಯಾಂಪಸ್ನಲ್ಲಿರುವ ಕರ್ನಾಟಕ ಶಿಕ್ಷಣ ಸೇವಾ ಸಮಿತಿ (ಕೆಎಸ್ಎಸ್ಎಸ್) ಪದವಿಪೂರ್ವ ಮಹಾವಿದ್ಯಾಲಯದ ದಶಮಾನೋತ್ಸವ ಹಾಗೂ ಪದ್ಮವಿಭೂಷಣ ಡಾ. ವಿಶ್ವೇಶತೀರ್ಥ ಶ್ರೀಪಾದಂಗಳವರ ಪುತ್ಥಳಿ ಅನಾವರಣ ಸಮಾರಂಭ ಜ. 7ರಂದು ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಗೌರವ ಕಾರ್ಯದರ್ಶಿ ಡಾ. ಜಿ.ಕೆ. ಸತ್ಯಮೂರ್ತಿ ಆಚಾರ್ಯ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಆರಂಭವಾದ ಕಾಲೇಜು ಉತ್ತಮ ಕಲಿಕಾ ವಾತಾವರಣ ಹೊಂದಿದೆ. ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನಗಳಿವೆ. ವ್ಯವಸ್ಥಿತ ಭೋಜನಾಲಯ, ವಸತಿ ನಿಲಯ ಇಲ್ಲಿದೆ. ಅನೇಕ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಪಡೆದರೂ ಕಾಲೇಜಿಗೆ ಪ್ರವೇಶ ಪಡೆದ ನಂತರ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಅಣಿಯಾಗಿದ್ದಾರೆ ಎಂದರು.
28 ವಿದ್ಯಾರ್ಥಿಗಳಿಂದ 2012ರಲ್ಲಿ ವಿಜ್ಞಾನ ಪಿಯು ಕಾಲೇಜು, 2020ರಲ್ಲಿ ವಾಣಿಜ್ಯ ವಿಭಾಗ ಅರಂಭಿಸಿದೆ. ಈ ವರ್ಷದಿಂದ ಶ್ರೀಆನಂದತೀರ್ಥ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಇದೀಗ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಷ್ಟ್ರ ಸಂತ ಹಾಗೂ ಕಾಲೇಜಿನ ಸಂಸ್ಥಾಪಕರಾದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರ ಮಾರ್ಬಲ್ ಪುತ್ಥಳಿಯನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಅನಾವರಣಗೊಳಿಸುವರು. ನಂತರ ಸಭಾ ಕಾರ್ಯಕ್ರಮ ಜರುಗಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಕುಸುಮಾವತಿ ಶಿವಳ್ಳಿ ಹಾಗೂ ಮೇಯರ್ ಈರೇಶ ಅಂಚಟಗೇರಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ, ಗೋಪಾಲ ಕುಲಕರ್ಣಿ, ಎ.ಸಿ. ಗೋಪಾಲ, ಎ.ಪಿ. ಐತಾಳ, ಗೋವಿಂದ ಮೈಸೂರು, ಮನೋಹರ ಪರ್ವತಿ, ವಿಶ್ವನಾಥ ಕುಲಕರ್ಣಿ ಗೋಷ್ಠಿಯಲ್ಲಿದ್ದರು.