ಕೆಎಸ್‌ಎನ್ ಮನೆ ಸ್ಮಾರಕವಾಗಲಿ

28.kkr,1
Published on

ಕಿಕ್ಕೇರಿ: ಬಡತನದಲ್ಲಿಯೇ ಹುಟ್ಟಿ ಕಾವ್ಯದ ಮೂಲಕ ನಾಡಿಗೆ ಸಿರಿವಂತಿಕೆ ನೀಡಿದ ಕವಿ ಕೆ.ಎಸ್. ನರಸಿಂಹಸ್ವಾಮಿ ಕಿಕ್ಕೇರಿಯವರು ಎನ್ನುವುದೇ ಪುಣ್ಯ ಎಂದು ಸ್ಪಂದನಾ ಟ್ರಸ್ಟಿ ತ್ರಿವೇಣಿ ಹೇಳಿದರು.

ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್ ಮಂಗಳವಾರ ಆಯೋಜಿಸಿದ್ದ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಳೆಯ ಮನಸ್ಸಿನಲ್ಲಿ ನಮ್ಮೂರಿನ ಕವಿಯ ಪರಿಚಯ ಮಾಡಿದ್ದಲ್ಲಿ ಮುಂದೆ ಬದುಕಿನ ಏರಿಳಿತವನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ. ಒಲವು, ಪ್ರೀತಿಯಿಂದ ಎಲ್ಲವನ್ನು ಗೆಲ್ಲುವುದು ಸಾಧ್ಯ ಎಂದು ತೋರಿಸಿಕೊಟ್ಟ ಕವಿಯ ನೆನಪು ಶಾಶ್ವತವಾಗಿರಲು ಪಟ್ಟಣದಲ್ಲಿನ ಮನೆ ಸ್ಮಾರಕವಾಗಿಸಬೇಕಿದೆ. ಕವಿಗೆ ಕಾವ್ಯಸ್ಫೂರ್ತಿಯಾದ ಸಿರಿಗೆರೆ(ಅಮಾನಿಕೆರೆ)ಯನ್ನು ಅಭಿವೃದ್ಧಿ ಪಡಿಸಬೇಕು. ಕವಿಯ ನೆನಪಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆದಲ್ಲಿ ಯುವಕರಲ್ಲಿ ಕಾವ್ಯ, ಕನ್ನಡದ ಕುರಿತು ಅರಿವು ಮೂಡಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಕೆ.ಎಸ್. ನರಸಿಂಹಸ್ವಾಮಿ ವಿರಚಿತ ಗೀತೆಗಳನ್ನು ಹಾಡಿದರು. ಕವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಿದರು. ಸಾಮಾಜಿಕ ಸೇವಾಕರ್ತೆ ಕವಿತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net