

ಚಾಮರಾಜನಗರ: ಬಸ್ ಪಾಸ್‌ಗಾಗಿ ಅಲೆಯಬೇಕು, ಬಸ್‌ಗಳಲ್ಲಿ ಅಂಗವಿಕಲರಿಗೆ ಸೀಟ್ ಕೊಡುವುದಿಲ್ಲ, ಅಶ್ವಮೇಧ ಬಸ್‌ನಲ್ಲಿ ಪಾಸ್ ಸ್ವೀಕಾರ ಮಾಡುವುದಿಲ್ಲ.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಅಂಗವಿಕಲರಿಂದ ಕೇಳಿ ಬಂದ ದೂರುಗಳಿವು. ಹೆಬ್ಬಸೂರು ಮಹದೇವು ಮಾತನಾಡಿ, ಕೆಎಸ್‌ಆರ್‌ಟಿಸಿಯಲ್ಲಿ ಅಂಧರು, ಅಂಗವಿಕಲರು ಪಾಸ್ ಪಡೆದುಕೊಳ್ಳಲು 15ರಿಂದ 20 ದಿನ ಅಲೆಸುತ್ತಾರೆ. ಇಲ್ಲಿನ ಕೇಸ್‌ವರ್ಕರ್ ಸಭ್ಯತೆಯಿಂದ ವರ್ತಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಮುಖಂಡ ರಮೇಶ್ ಧ್ವನಿಗೂಡಿಸಿದರು. ಡಿಪೋದಲ್ಲಿ ಪಾಸ್ ಪಡೆದುಕೊಳ್ಳಲು ಹೋದರೆ ದ್ವಿಚಕ್ರ ವಾಹನದ ಚಕ್ರದ ಗಾಳಿ ಬಿಡುತ್ತಾರೆ. ಒಳಗೆ ಬರಬಾರದು ಎಂದು ಹೇಳುತ್ತಾರೆ. ರ‌್ಯಾಂಪ್ ನಿರ್ಮಾಣ ಮಾಡಿಲ್ಲ ಎಂದು ದೂರಿದರು. ಅಂಗವಿಕಲರ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಅಶ್ವಮೇಧ ಬಸ್‌ನಲ್ಲಿ ಅಂಗವಿಕಲರ ಪಾಸ್ ಸ್ವೀಕಾರ ಮಾಡುತ್ತಿಲ್ಲ ಎಂದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಅಂಗವಿಕಲರಿಗೆ ಸೌಲಭ್ಯ ಒದಗಿಸಬೇಕಿರುವುದು ಸೂಕ್ಷ್ಮ ಸಂವೇದನೆಯ ಕಾರ್ಯ. ಅಂಗವಿಕಲರಿಗೆ ಅನುಕೂಲ ಕಲ್ಪಿಸಿಕೊಡುವುದು ಕರುಣೆಯಲ್ಲ, ಕರ್ತವ್ಯ ಎಂದರು. ಸಭೆಯಲ್ಲಿ ಭಾಗವಹಿಸಿದ್ದ ಸೂಪರಿಂಟೆಂಡೆಂಡ್ ವಿನಾಯಕ್ ಮಾತನಾಡಿ, ಅಂಗವಿಕಲರ ಪಾಸ್‌ಗಳನ್ನು ಡಿಪೋದಲ್ಲಿ ವಿತರಣೆ ಮಾಡಲಾಗುತ್ತದೆ. ಅಶ್ವಮೇಧ ಬಸ್‌ಗಳಲ್ಲಿ ಪಾಸ್ ಸ್ವೀಕಾರ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕೇಸ್ ವರ್ಕರ್‌ಗೆ ಸಭ್ಯತೆಯಿಂದ ವರ್ತಿಸಲು ತಿಳಿಸಲಾಗುವುದು ಎಂದರು. ಡಿಸಿ ಶಿಲ್ಪಾನಾಗ್ ಮಾತನಾಡಿ, ಕೇಸ್ ವರ್ಕರ್‌ಗೆ ನೋಟಿಸ್ ನೀಡಿ. ಯಾರೋ ಒಬ್ಬರು ತಪ್ಪು ಮಾಡಿದರೆ ಇಡೀ ಕೆಎಸ್‌ಆರ್‌ಟಿಸಿಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ಆಧಾರ್ ಕಾರ್ಡ್ ಅಭಿಯಾನ:
ಜಿಲ್ಲೆಯಲ್ಲಿ ಮತ್ತೆ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಡಿಸಿ ಶಿಲ್ಪಾನಾಗ್ ತಿಳಿಸಿದರು. ಅಂಗವಿಕಲರಾದ ಭಾಗ್ಯಾ ಎಂಬುವರು, ತನಗೆ ಆಧಾರ್ ಕಾರ್ಡ್ ಪಡೆಯಲು ಇಂದಿಗೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಡಿಸಿ ಪ್ರತಿಕ್ರಿಯಿಸಿ, ಹೆಬ್ಬೆಟ್ಟು ಗುರುತು ನೀಡಲು ಸಾಧ್ಯವಾಗದೆ ಇರುವವರಿಗೂ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದೇವೆ. ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಆಧಾರ್ ಕಿಟ್ ತರಿಸಿ ಮನೆ ಬಾಗಿಲಿನಲ್ಲಿ ಆಧಾರ್ ಕಾರ್ಡ್ ಮಾಡಿಸುವ ಅಭಿಯಾನ ಮಾಡಲಾಗಿತ್ತು. ಇದೀಗ ಜ.1ರಿಂದ ಮತ್ತೊಮ್ಮೆ ಅಭಿಯಾನ ಮಾಡಲಾಗುವುದು ಎಂದರು.
ಅಮಚವಾಡಿ ಗ್ರಾಮ ಪಂಚಾಯಿತಿ ಸದಸ್ಯ ರಾಮು ಮಾತನಾಡಿ, ಪಂಚಾಯಿತಿಯಲ್ಲಿ ಅಂಗವಿಕಲರ ಶೇ.5 ಮೀಸಲು ಅನುದಾನ ದುರ್ಬಳಕೆಯಾಗಿದೆ ಎಂದು ದೂರಿದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಡಿಸಿ ಶಿಲ್ಪಾನಾಗ್ ಮಾತನಾಡಿ, 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಎಷ್ಟು ಅನುದಾನ ಬಳಕೆ ಮಾಡಲಾಗಿದೆ ಎಂದು ಆಡಿಟ್ ಮಾಡಿಸಲಾಗುವುದು ಎಂದರು. ಅಮಚವಾಡಿ ಮಹೇಶ್ ಎಂಬುವರು ಪಡಿತರ ಚೀಟಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಡಿಸಿ ಶಿಲ್ಪಾನಾಗ್ ಆಹಾರ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಗಮನಹರಿಸಲು ತಿಳಿಸಿದರು. ಸಭೆಯಲ್ಲಿ ಅಂಗವಿಕಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.