

ಬೇಲೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಮಿನಿ ಬಸ್ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ 12 ವಿದ್ಯಾರ್ಥಿಗಳಿಗೆ ಗಂಬೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಸೋಲದೇವರಹಳ್ಳಿ ಸಮೀಪ ಬುಧವಾರ ಬೆಳಗ್ಗೆ 6 ಗಂಟೆಯಲ್ಲಿ ನಡೆದಿದ್ದು, ಗಾಯಾಳುಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಆಧಿಚುಂಚನಗಿರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಮಿನಿ ಬಸ್‌ನಲ್ಲಿ ಕರೆ ತಂದು ಬೇಲೂರಿನಿಂದ ಚನ್ನರಾಯಪಟ್ಟಣ ಕಡೆಗೆ ತೆರಳುತಿದ್ದ ಸಂದರ್ಭ ಚಾಲಕ ಬೇಲೂರು ತಾಲೂಕಿನ ಸೋಲದೇವರಹಳ್ಳಿ ಸಮೀಪ ಖಾಸಗಿ ಮಿನಿ ಬಸ್‌ನ್ನು ಸಂಪೂರ್ಣವಾಗಿ ಬಲ ಭಾಗಕ್ಕೆ ತೆಗೆದು ಕೊಂಡು ಹೋಗಿ ಬೆಂಗಳೂರಿನಿಂದ ಪ್ರಯಾಣಿಕರೊಂದಿಗೆ ಚಿಕ್ಕಮಗಳೂರಿಗೆ ತೆರಳುತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಳಗ್ಗೆ 6 ಗಂಟೆ ಸಮಯದಲ್ಲಿ ನೇರವಾಗಿ ಮುಖಾಮುಖಿ ಗುದ್ದಿದ್ದಾನೆ. ಇದರಿಂದ ಮಿನಿ ಬಸ್‌ನಲ್ಲಿದ್ದ 12 ವಿದ್ಯರ್ಥಿಗಳಿಗೆ ಗಂಬೀರ ಗಾಯಗಳಾದರೆ, ಶಿಕ್ಷಕರು ಸೇರಿದಂತೆ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಕೆಲವರಿಗೆ ಸಣ್ಣದಾಗಿ ಗಾಯವಾಗಿರುವುದು ಬಿಟ್ಟರೆ ಯಾವುದೆ ಗಂಬೀರ ಗಾಯಗಳಾಗಿಲ್ಲ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಹಾಸನದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಬೇಲೂರು ತಾಲೂಕಿನ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.