

ಎನ್.ಆರ್.ಪುರ: ಕೊರಲಕೊಪ್ಪದಿಂದ ಕುದುರೆಗುಂಡಿಯವರೆಗಿನ ಮಾರ್ಗ ಮಧ್ಯದ ಎಲ್ಲ ಬಸ್ ನಿಲ್ದಾಣದಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗೆ ನಿಲುಗಡೆಗೆ ಶಿವಮೊಗ್ಗ ಜಿಲ್ಲಾ ರಸ್ತೆ ಸಾರಿಗೆ ನಿಗಮದ ವಿಭಾಗಾಧಿಕಾರಿ ಆದೇಶಿಸಿದ್ದಾರೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ತಿಳಿಸಿದರು.
ಶಿವಮೊಗ್ಗದಿಂದ ಎನ್.ಆರ್.ಪುರ ಮಾರ್ಗವಾಗಿ ಶೃಂಗೇರಿಗೆ ಕೆಎಸ್‌ಆರ್‌ಟಿಸಿ 2 ಬಸ್‌ಗಳು ಹಾಗೂ ಶಿಕಾರಿಪುರದಿಂದ ಎನ್.ಆರ್.ಪುರ ಮಾರ್ಗವಾಗಿ ಶೃಂಗೇರಿಗೆ 2 ಬಸ್‌ಗಳು ಇದುವರೆಗೆ ಸಂಚರಿಸುತ್ತಿದ್ದವು. ಆದರೆ ಎಕ್ಸ್‌ಪ್ರೆಸ್ ಬಸ್ ಆಗಿರುವುದರಿಂದ ನಿರ್ದಿಷ್ಟ ಬಸ್ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಮಾಡಲಾಗುತ್ತಿತ್ತು. ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರೂ ಎನ್.ಆರ್.ಪುರ ತಾಲೂಕಿನ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗುತ್ತಿರಲಿಲ್ಲ. ಇದನ್ನು ಮನಗಂಡ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯವರು ಚರ್ಚೆ ನಡೆಸಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಘು, ಬೇಸಿಲ್ ತಂಡವು ಶಿವಮೊಗ್ಗಕ್ಕೆ ತೆರಳಿ ಶಿವಮೊಗ್ಗ ಜಿಲ್ಲಾ ರಸ್ತೆ ಸಾರಿಗೆ ನಿಗಮದ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ವಿಭಾಗಾಧಿಕಾರಿಗಳು ಎನ್.ಆರ್.ಪುರ ತಾಲೂಕಿನಲ್ಲಿ ಬರುವ ಎಲ್ಲ ಬಸ್ ನಿಲ್ದಾಣದಲ್ಲೂ ಬಸ್ ನಿಲುಗಡೆ ಮಾಡುವಂತೆ ಆದೇಶ ಮಾಡಿದ್ದು, ಈ ಆದೇಶ ಗುರುವಾರವೇ ಜಾರಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಸಮಸ್ಯೆ ಇದ್ದರೆ ಸಾರ್ವಜನಿಕರು ಮೊ. 9663791987, 9591181096, 8310261734 ಸಂಪರ್ಕಿಸಬಹುದು ಎಂದು ತಿಳಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎಸ್.ರಘು, ಬೇಸಿಲ್, ಟಿ.ಟಿ.ಇಸ್ಮಾಯಿಲ್, ಎನ್.ಎ.ಹೂವಮ್ಮ, ಜಿ.ನಾಗರಾಜ ಇದ್ದರು.