ಕೆಎಸ್‌ಆರ್‌ಟಿಸಿ ನಿಲ್ದಾಣದ ಅಂಗಡಿ,ಮುಂಗಟ್ಟುಗಳ ಮೇಲೆ ದಾಳಿ

ctd nagarasabe dalli.....
Published on

ಚಿತ್ರದುರ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹೋಟೆಲ್, ಬೇಕರಿ ಹಾಗೂ ಅಂಗಡಿಗಳ ಮೇಲೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ ಹಾಗೂ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವುದು. ಅಸುರಕ್ಷಿತವಾಗಿ ತೆರೆದಿಟ್ಟ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಕಂಡುಬಂತು. ಕೆಲವೆಡೆ ಇದ್ದ ಕೆಟ್ಟುಹೋದ ಆಹಾರ ಪದಾರ್ಥಗಳು ಹಾಗೂ ನಿಷೇಧಿಸಿದ ಪಾಸ್ಟಿಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಮಾಲೀಕರಿಗೆ ದಂಡ ವಿಧಿಸಿ ತಾಜಾ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಂತೆ ತಾಕೀತು ಮಾಡಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶಾಮ್‌ಭಟ್ ಅವರ ತಂಡ ಮಾ.27 ರಂದು ಈ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಂದರ್ಭ ಅಂಗಡಿ, ಬೇಕರಿಗಳಲ್ಲಿ ಅವಧಿ ಮುಗಿದ ತಂಪು ಪಾನೀಯ ಮಾರಾಟ ಮಾಡುತ್ತಿದ್ದನ್ನು ಗಮನಿಸಿತ್ತು. ನಿಲ್ದಾಣದ ಕೆಲವು ಅಂಗ ಡಿಗಳಲ್ಲಿ ಕಳಪೆ ಗುಣಮಟ್ಟದ ಕುಡಿಯುವ ನೀರಿನ ಬಾಟೆಲ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ನಿಲ್ದಾಣ ತಂಬಾಕು ನಿಷೇಧಿತ ಪ್ರದೇಶ ವಾಗಿದ್ದರೂ ಕೆಲವೆಡೆ ಬೀಡಿ, ಸಿಗರೇಟು ಸೇರಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜಾಬ್ದಾರಿ ತೋರುತ್ತಾರೆಂದು ಪ್ರಯಾಣಿಕ ಎಸ್. ಪ್ರದೀಪ್ ದೂರಿದರು.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಈಚೆಗೆ ಭೇಟಿ ನೀಡಿದ್ದ ನಂತರದಲ್ಲಿ ಬಸ್ ನಿಲ್ದಾಣದಲ್ಲಿ ಸ್ಪಲ್ಪ ಮಟ್ಟಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತಿದೆ. ಆದರೆ, ಅಂಗಡಿ, ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ಹೇಳಿದರು.

ನಗರಸಭೆ ಪರಿಸರ ಇಂಜಿನಿಯರ್ ಸಿ. ಜಾಫರ್, ಆರೋಗ್ಯ ನಿರೀಕ್ಷಕರಾದ ಹೀನಾ ಕೌಸರ್, ಭಾರತಿ, ನಾಗರಾಜ್, ಜಯಪ್ರಕಾಶ್, ರುಕ್ಮಿಣಿ ಇತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net