ಕೆಎಲ್​ಇ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ

h24-KLE Hospital 1
Published on

ಹುಬ್ಬಳ್ಳಿ: ನಗರದ ಗಬ್ಬೂರ ಕ್ರಾಸ್ ಬಳಿ 600 ಕೋಟಿ ರೂ. ವೆಚ್ಚದಲ್ಲಿ ಕೆಎಲ್​ಇ ಸಂಸ್ಥೆಯ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಕಟ್ಟಡ ನಿರ್ವಣಕ್ಕೆ ಗುರುವಾರ ನಾಡಿನ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಈ ಮೂಲಕ ಕೆಎಲ್​ಇ ಸಂಸ್ಥೆಯು ಜನೋಪಯೋಗಿಯಾದ ಶೈಕ್ಷಣಿಕ ಹಾಗೂ ವೈದ್ಯಕೀಯ ಹಬ್ ನಿರ್ವಿುಸುವ ಮಹತ್ವದ ಕಾರ್ಯಕ್ಕೆ ಮುಂದಾಯಿತು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ಸುಮಾರು 33 ಎಕರೆ ಪ್ರದೇಶದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತೆ ಕಟ್ಟಡ ನಿರ್ವಣಗೊಳ್ಳಲಿದೆ. ಒಟ್ಟು 10 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡವು 1200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಒಳಗೊಂಡಿರಲಿದೆ. ಈ ಉದ್ದೇಶಕ್ಕೆ ಮೂರುಸಾವಿರ ಮಠ 22 ಎಕರೆ 32 ಗುಂಟೆ ಭೂಮಿಯನ್ನು ದಾನವಾಗಿ ನೀಡಿದೆ.

ಮೂರುಸಾವಿರ ಮಠದ ಹಿಂದಿನ ಜಗದ್ಗುರು ಡಾ. ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆ ನಿರ್ವಣಗೊಳ್ಳಬೇಕೆಂಬ ಕನಸು ಕಂಡಿದ್ದರು. ಇದರ ಜತೆ ಕೆಎಲ್​ಇ ಸಂಸ್ಥೆಯ ಬಹು ವರ್ಷಗಳ ಕನಸು ಸಹ ಈಗ ನನಸಾಗುತ್ತಿದೆ. ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಜನತೆಗೆ ಅನುಕೂಲವಾಗಲಿದೆ ಎಂದು ಆಶಿಸಲಾಗುತ್ತಿದೆ.

2 ವರ್ಷದಲ್ಲಿ ಪೂರ್ಣ: ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬ ನಮ್ಮ ಕನಸು ಇಂದು ಈಡೇರುತ್ತಿದೆ. 2 ವರ್ಷದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸಲಾಗುವುದು. ಇದರಿಂದ ರಾಜ್ಯದಲ್ಲಿ 3 ವೈದ್ಯಕೀಯ ಕಾಲೇಜ್ ನಡೆಸುವ ಏಕೈಕ ಖಾಸಗಿ ಸಂಸ್ಥೆಯೆಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಲಿದ್ದೇವೆ. ಮೊದಲ ಹಂತದಲ್ಲಿ ಸಾವಿರ ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 2ನೇ ಹಂತದಲ್ಲಿ 200 ಹಾಸಿಗೆಯ ಸೂಪರ್​ಸ್ಪೆಷಾಲಿಟಿ ಆಸ್ಪತ್ರೆ ನಿರ್ವಿುಸಲಿದ್ದೇವೆ ಎಂದು ತಿಳಿಸಿದರು.

ಸಂಸ್ಥೆಯು ಪುಣೆಯಲ್ಲಿ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ವಾಧೀನ ಪಡಿಸಿಕೊಂಡಿದೆ. ಮಾರ್ಚ್-ಏಪ್ರಿಲ್​ನಲ್ಲಿ ಅದು ಕಾರ್ಯಾರಂಭ ಮಾಡಲಿದೆ. ಮಹಾರಾಷ್ಟ್ರ ಸರ್ಕಾರ ಮುಂಬೈಯಲ್ಲಿ 4 ಎಕರೆ ಜಾಗ ಮಂಜೂರು ಮಾಡಿದೆ. ಬೆಳಗಾವಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಚಿಕಿತ್ಸೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಸರ್ಪ¤ಗಳ ದೂರದೃಷ್ಟಿ ಹಾಗೂ ದಾನದ ಶಕ್ತಿಯಿಂದ ಕೆಎಲ್​ಇ ಸಂಸ್ಥೆ ಬೆಳೆದು ಬಂದಿದೆ. ಇಲ್ಲಿಯ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯಿಂದ ಸುತ್ತಲಿನ 4-5 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ನನ್ನ ಕ್ಷೇತ್ರ (ಶಿಗ್ಗಾಂವ -ಸವಣೂರು)ದಲ್ಲಿ ಅರಟಾಳು ರುದ್ರಗೌಡರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯಲು ಕೆಎಲ್​ಇ ಸಂಸ್ಥೆ ಮುಂದಾಗಬೇಕು. ಅದಕ್ಕೆ ಬೇಕಾದ ಜಮೀನು ಮಂಜೂರಿ ಸೇರಿ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಉತ್ತರ ಕರ್ನಾಟಕದ ಶೈಕ್ಷಣಿಕ ಬೆಳವಣಿಗೆಯಲ್ಲಿ ಕೆಎಲ್​ಇ ಸಂಸ್ಥೆಯ ಪಾತ್ರ ದೊಡ್ಡದು. ಈ ಸಂಸ್ಥೆಗೆ ಮೂರುಸಾವಿರ ಮಠ ಭೂಮಿ ದಾನ ನೀಡಿರುವುದು ಪ್ರಶಂಸನೀಯ. ಇಲ್ಲಿ ವೈದ್ಯಕೀಯ ಕಾಲೇಜ್-ಆಸ್ಪತ್ರೆ ನಿರ್ವಣಗೊಂಡರೆ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಕೆಎಲ್​ಇ ನಿರ್ದೇಶಕರಾದ ವಿ.ಎಸ್. ಸಾಧುನವರ, ಮಹಾಂತೇಶ ಕವಟಗಿಮಠ, ಶಂಕರಣ್ಣ ಮುನವಳ್ಳಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಎಂಎಲ್​ಸಿಗಳಾದ ಎಸ್.ವಿ. ಸಂಕನೂರ, ಬಸವರಾಜ ಹೊರಟ್ಟಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಆಶಾತಾಯಿ ಕೋರೆ ವೇದಿಕೆಯಲ್ಲಿದ್ದರು. ಕೆಎಲ್​ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ವಿವಿ ಕುಲಸಚಿವ ಡಾ. ವಿ.ಎ. ಕೋಟಿವಾಲೆ ವಂದಿಸಿದರು.

ಶಿಕ್ಷಣ ಸಂಸ್ಥೆಗೆ ಜಾಗ ಕೊಟ್ಟರೆ ತಪ್ಪೇನಿದೆ?: 105 ವರ್ಷಗಳ ಇತಿಹಾಸವಿರುವ ಕೆಎಲ್​ಇ ಸಂಸ್ಥೆಗೆ ಸರ್ಕಾರ, ಸಮಾಜ, ಹಲವು ಮಠ ಮಾನ್ಯಗಳು ಭೂಮಿಯನ್ನು ದಾನವಾಗಿ ಕೊಟ್ಟಿವೆ. ಹಾಗಿರುವಾಗ ನಾವು ಕೊಟ್ಟರೆ ತಪ್ಪೇನಿದೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರಶ್ನಿಸಿದರು. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ನನ್ನ ಹಿಂದಿನ ಗುರುಗಳು (ಲಿಂ. ಜಗದ್ಗುರು ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ) ಒಳ್ಳೆಯ ಸಂಕಲ್ಪದಿಂದ ಕಾಲೇಜ್ ನಿರ್ವಣಕ್ಕೆ ಈ ಜಾಗ ಕೊಟ್ಟಿದ್ದೇನೆ ಎಂದು ನನಗೆ ಹೇಳಿದ್ದರು. ಆಗ ನನ್ನ ಸಹಿ ಸಹ ಪಡೆದಿದ್ದರು. ಶಿಷ್ಯನಾಗಿ ಅವರ ಮಾತನ್ನೇ ನೆರವೇರಿಸಿದ್ದೇನೆ’ ಎಂದು ಹೇಳಿದರು.

ಭಾಗಿಯಾದ ಗಣ್ಯರಿಂದ ಪ್ರಶಂಸೆ: ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಕಟ್ಟಡ ನಿರ್ವಣಕ್ಕೆ ಭೂಮಿ ಪೂಜೆ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರು ಕೆಎಲ್​ಇ ಸಂಸ್ಥೆಯು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು. ಹುಬ್ಬಳ್ಳಿಯಲ್ಲಿ ಈಗಾಗಲೇ ಇರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಜತೆಗೆ ಮತ್ತೊಂದು ಮೆಡಿಕಲ್ ಕಾಲೇಜ್ ನಿರ್ವಣವಾಗುತ್ತಿರುವುದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದರು. ಈ ಮೂಲಕ ಹುಬ್ಬಳ್ಳಿಯು ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಹಬ್ ಆಗಿ ರೂಪಗೊಳ್ಳಲಿ ಎಂದು ಹಾರೈಸಿದರು. ಧಾರವಾಡ ಶಾಸಕ ಅಮೃತ ದೇಸಾಯಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಅಶೋಕ ಕಾಟವೆ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ತಜ್ಞ ವೈದ್ಯರಾದ ಡಾ. ಜಿ.ಬಿ. ಸತ್ತೂರ, ಡಾ. ಸುರೇಶ ದುಗಾಣಿ, ಡಾ. ಎಂ.ಜಿ. ಹಿರೇಮಠ, ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಕಾಂಗ್ರೆಸ್ ಮುಖಂಡರಾದ ಮೋಹನ ಅಸುಂಡಿ, ಶರಣಪ್ಪ ಕೊಟಗಿ, ಜೆಡಿಎಸ್ ನಾಯಕ ರಾಜಣ್ಣ ಕೊರವಿ, ವಾಣಿಜ್ಯೋದ್ಯಮಿ ರಮೇಶ ಪಾಟೀಲ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾಲೇಜ್​ಗೆ ತ್ವರಿತಗತಿಯಲ್ಲಿ ಅನುಮೋದನೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ; ಅತಿಥಿಗಳಾಗಿ ಪಾಲ್ಗೊಂಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪ್ರತಿ 3 ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಇರಬೇಕೆಂಬ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸಿಕೊಂಡು ಬಂದಿದೆ. 2015-20ರ ಅವಧಿಯಲ್ಲಿ 157 ವೈದ್ಯಕೀಯ ಕಾಲೇಜ್​ಗಳಿಗೆ ಅನುಮೋದನೆ ನೀಡಲಾಗಿದೆ. ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಹಾಗೂ ತ್ವರಿತಗೊಳಿಸಿದ್ದೇವೆ ಎಂದರು. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದವರು ಭಾರತದಲ್ಲಿ ಪ್ರ್ಯಾಕ್ಟಿಸ್ ಮಾಡ ಬೇಕಾದರೆ ಒಂದು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಕಳೆದ ವರ್ಷ ಇಂಥ ಪರೀಕ್ಷೆ ಬರೆದ 97,636 ಅಭ್ಯರ್ಥಿಗಳಲ್ಲಿ ಕೇವಲ 16 ಸಾವಿರ ಜನ ತೇರ್ಗಡೆಯಾಗಿದ್ದಾರೆ. ಆದರೆ, ಭಾರತದಲ್ಲಿ ಕಲಿತ ವೈದ್ಯರಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಇದಕ್ಕೆ ಮೂಲ ಕಾರಣ ನಮ್ಮ ಸಂಸ್ಕಾರ, ಸಂಸ್ಕೃತಿ ಹಾಗೂ ಬದ್ಧತೆ ಎಂದು ಹೇಳಿದರು.

ಯಾವುದೇ ಕೆಲಸ ಇದ್ದರೆ ಬನ್ನಿ…: ದೇಶದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಕೌಶಲಕ್ಕೆ ಒತ್ತು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಎಂಸಿಐ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ರದ್ದು ಪಡಿಸಿ ಮೆಡಿಕಲ್ ಎಜ್ಯುಕೇಶನ್ ಕಮಿಷನ್​ಅನ್ನು ಅಸ್ತಿತ್ವಕ್ಕೆ ತಂದಿದೆ. ಇದಕ್ಕೂ ಮೊದಲು ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪಾರ್ಶ್ವವಾಯು ಬಡಿದಂತಾಗಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಕೆಎಲ್​ಇ ಸಂಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗಬೇಕಿದ್ದರೆ ನನ್ನ ಗಮನಕ್ಕೆ ತಂದರೆ ತ್ವರಿತವಾಗಿ ಮಾಡಿಸಿಕೊಡಲಾಗುವುದು ಎಂದರು.

ರಸ್ತೆಗೆ ಭೂಮರಡ್ಡಿ ಹೆಸರಿಡಿ: ಸ್ವಾಗತಿಸಿ ಮಾತನಾಡಿದ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು, ವಿದ್ಯಾನಗರ ಕೆಎಲ್​ಇ ಬಿವಿಬಿ ಕಾಲೇಜ್ ಎದುರಿನ ಹುಬ್ಬಳ್ಳಿ-ಧಾರವಾಡ ರಸ್ತೆಗೆ (ಹಳೇ ಪಿ.ಬಿ. ರಸ್ತೆ) ದಾನಶೂರ ಭೂಮರಡ್ಡಿ ರಸ್ತೆ ಎಂದು ನಾಮಕರಣ ಮಾಡುವಂತೆ ಕೋರಿ ಹು-ಧಾ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗುವುದು ಎಂದರು. ಇದಕ್ಕೆ ತಮ್ಮ ಭಾಷಣದ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒಪ್ಪಿಗೆ ಸೂಚಿಸಿದರು. ಭೂಮರಡ್ಡಿ ರಸ್ತೆಯೆಂದು ನಾಮಕರಣ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಪಕ್ಷಾತೀತವಾಗಿ ಎಲ್ಲರೂ ಒಪ್ಪುತ್ತಾರೆಂಬ ವಿಶ್ವಾಸ ತಮಗಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಅತ್ಯಂತ ಕಾಳಜಿಯ ಸೇವೆ…: ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಮನುಷ್ಯನ ಎರಡು ಬಹುಮುಖ್ಯ ಅವಶ್ಯಕತೆಗಳು. ಕೆಎಲ್​ಇ ಸಂಸ್ಥೆ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ನನಗೆ ಗುಂಡು ತಗುಲಿದಾಗ ಕೆಎಲ್​ಇ ಆಸ್ಪತ್ರೆ ಉತ್ತಮ ಚಿಕಿತ್ಸೆ ನೀಡಿತ್ತು. ಬೆಳಗಿನ ಜಾವ 4 ಗಂಟೆಗೆ ಆಸ್ಪತ್ರೆಗೆ ದಾಖಲಾದಾಗ ಸ್ವತಃ ಪ್ರಭಾಕರ ಕೋರೆ ಅವರೇ ಯೋಗಕ್ಷೇಮ ವಿಚಾರಿಸಲು ಬಂದಿದ್ದರು. ಕೆಎಲ್​ಇ ಆಸ್ಪತ್ರೆಯಲ್ಲಿ ನಿಜಕ್ಕೂ ಅತ್ಯುತ್ತಮವಾದ, ಕಾಳಜಿಪೂರ್ವಕವಾದ ಆರೋಗ್ಯ ಸೇವೆ ದೊರೆಯುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net