ಕೆಎಲ್​ಇ ತಾಂತ್ರಿಕ ವಿವಿ ಘಟಿಕೋತ್ಸವ

HBL h1-BVB
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭ (ಘಟಿಕೋತ್ಸವ) ನಗರದ ಬಿವಿಬಿ ಕ್ಯಾಂಪಸ್​ನಲ್ಲಿರುವ ಡಾ. ಪ್ರಭಾಕರ ಕೋರೆ ಸ್ಪೋರ್ಟ್ಸ್ ಅರೆನಾದಲ್ಲಿ ಏ. 2ರಂದು ಬೆಳಗ್ಗೆ 10.30ಕ್ಕೆ ಏರ್ಪಾಟಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿ ಉಪ ಕುಲಪತಿ ಡಾ. ಅಶೋಕ ಶೆಟ್ಟರ್, ಇಸ್ರೋ ಮಾಜಿ ಅಧ್ಯಕ್ಷ ಪದ್ಮವಿಭೂಷಣ ಡಾ.ಕೆ. ಕಸ್ತೂರಿ ರಂಗನ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು ಎಂದರು.

ಒಟ್ಟು ಸ್ನಾತಕ ಹಾಗೂ ಸ್ನಾತಕೋತ್ತರ 1,619 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. 35 ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಳ್ಳುವರು. ಇದರಲ್ಲಿ 10 ವಿದ್ಯಾರ್ಥಿಗಳು, 25 ವಿದ್ಯಾರ್ಥಿನಿಯರು ಇದ್ದಾರೆ. ಈ ಬಾರಿ ವಿನಾಯಕ ಕುಲಕರ್ಣಿ ಹಾಗೂ ಪ್ರೀತಿ ಬಳಿಗಾರ ಅವರು ಪಿಎಚ್.ಡಿ ಪದವಿ ಪಡೆಯಲಿದ್ದಾರೆ ಎಂದರು.

ಈ ವರ್ಷದಿಂದ ಎಸಿಸಿಎ ಮಾನ್ಯತೆ ಆಧಾರದ ಬಿಕಾಂ ಪದವಿಯನ್ನು ಆರಂಭಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಚಾಲ್ತಿಗೆ ತರಲಾಗಿದೆ. ಈ ಕೋರ್ಸ್ ದೆಹಲಿ, ಮುಂಬೈನಂಥ ಮಹಾನಗರಗಳಲ್ಲಿ ಇದ್ದವು. ಕೆಎಲ್​ಇ ಸಂಸ್ಥೆಯು ಪ್ರಥಮವಾಗಿ ಈ ಕೋರ್ಸ್ ಅನ್ನು ಉತ್ತರ ಕರ್ನಾಟಕದಲ್ಲಿ ಪ್ರಚುರಪಡಿಸಲಿದೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಉದ್ಯೋಗ ಲಭಿಸಲಿದೆ ಎಂದು ವಿವರಿಸಿದರು.

ಅಕಾಡೆಮಿಕ್ ಡೀನ್ ಡಾ. ಪ್ರಕಾಶ ತೆವರಿ, ರಿಜಿಸ್ಟ್ರಾರ್ ಡಾ. ಬಸವರಾಜ ಅನಾಮಿ, ಡಾ.ಎಂ.ಆರ್. ಪಾಟೀಲ, ಡಾ.ಎಂ.ಎಸ್. ಕೊಲ್ಹಾರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net