ಕೆಎಟಿ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

High curt 14 May 20
Published on

ಬೆಂಗಳೂರು: ಮೋಟಾರು ವಾಹನ ಇನ್​ಸ್ಪೆಕ್ಟರ್ (ಎಂವಿಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರೀಡೂ ಮಾಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕೆಎಟಿ ಆದೇಶ ಪ್ರಶ್ನಿಸಿ ವಿ.ಆರ್.ಲೋಕೇಶ್ ಸೇರಿ 11 ಮಂದಿ ಸಂಭಾವ್ಯ ಆಯ್ಕೆ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ, ಈ ಮಧ್ಯಂತರ ಆದೇಶ ಮಾಡಿದೆ. ಖಾಲಿ ಇದ್ದ 150 ಎಂವಿಐ ಹುದ್ದೆ ಭರ್ತಿಗೆ 2016ರ ಫೆ. 4ರಂದು ಕೆಪಿಎಸ್​ಸಿ ಅರ್ಜಿ ಆಹ್ವಾನಿಸಿತ್ತು. ಪರೀಕ್ಷೆಗಳ ಬಳಿಕ 2019ರ ಜು. 4ರಂದು ಸಂಭಾವ್ಯ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ವೇಳೆ, ಗೋಕುಲ್ ದಾಸ್ ಹಾಗೂ ವೀರಣ್ಣಗೌಡ ಪಾಟೀಲ್ ಎಂಬ ಅಭ್ಯರ್ಥಿಗಳ ಅರ್ಜಿಗಳನ್ನು ಕೆಪಿಎಸ್​ಸಿ ತಿರಸ್ಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಅಭ್ಯರ್ಥಿಗಳಿಬ್ಬರೂ ಕೆಎಟಿ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ, ಕೆಪಿಎಸ್​ಸಿ ಆದೇಶ ರದ್ದುಪಡಿಸಿ, ಗೋಕುಲ್​ದಾಸ್ ಹಾಗೂ ಪಾಟೀಲ್ ಅವರನ್ನು ಮೆರಿಟ್ ಹಾಗೂ ಮಿಸಲಾತಿ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸಬೇಕು ಎಂದು ಆದೇಶಿಸಿತ್ತು. ಆ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿರುವ ಲೋಕೇಶ್ ಹಾಗೂ ಇತರ ಅಭ್ಯರ್ಥಿಗಳು, ಕೆಎಟಿ ಆದೇಶದಿಂದ ತಮ್ಮ ಆಯ್ಕೆ ಪ್ರಕ್ರಿಯೆಗೆ ತೊಂದರೆಯಾಗಲಿದೆ.

ಆದ್ದರಿಂದ, ಆ ಆದೇಶ ರದ್ದುಪಡಿಸಬೇಕು. ಎಂವಿಐ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್​ಸಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net