

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ ೩೮೪ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಮರು ಪರೀಕ್ಷೆ ನಗರದ ೩೮ ಕೇಂದ್ರಗಳಲ್ಲಿ ಯಾವುದೇ ಗೊಂದಲವಿಲ್ಲದೆ ನಡೆಯಿತು. ಆ.೨೭ರಂದು ನಡೆದಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ದೋಷ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಯಿತು.
ನಗರದ ೩೮ ಕೇಂದ್ರಗಳಲ್ಲಿ ಮೊದಲ ಪ್ರಶ್ನೆ ಪತ್ರಿಕೆ-೧ಕ್ಕೆ ೧೨೨೦೨ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ೫೬೮೪ ಅಭ್ಯರ್ಥಿಗಳು ಹಾಜರಾಗಿದ್ದು, ೬೫೧೮ ಜನ ಗೈರಾದರು. ಮಧ್ಯಾಹ್ನ ನಡೆದ ಎರಡನೇ ಪತ್ರಿಕೆ-೨ರ ಪರೀಕ್ಷೆಯಲ್ಲಿ ೫೬೬೫ ಅಭ್ಯರ್ಥಿಗಳು ಹಾಜರಾಗಿದ್ದು, ೬೫೩೭ ಅಭ್ಯರ್ಥಿಗಳು ಗೈರು ಹಾಜರಾದರು.
ತೀವ್ರ ಕಟ್ಟೆಚ್ಚರ: ಪರೀಕ್ಷೆ ಅಕ್ರಮ ತಡೆ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿ, ಪರೀಕ್ಷೆ ಕೇಂದ್ರದಲ್ಲಿ ಬಿಡಲಾಯಿತು. ಲೋಹ ಶೋಧಕಗಳಿಂದ ತಪಾಸಣೆ ನಡೆಸಲಾಯಿತು. ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ ಹೊರಗೆ ಇಟ್ಟು ಬರುವಂತೆ ಸೂಚಿಸಲಾಯಿತು. ಎರಡ್ಮೂರು ಹಂತದಲ್ಲಿ ತಪಾಸಣೆ ನಡೆಸಿ, ಕೇಂದ್ರಗಳ ಬಳಿ ಕಟ್ಟೆಚ್ಚರ ವಹಿಸಲಾಗಿತ್ತು.