ಕೆಆರ್‌ಎಸ್‌ನಲ್ಲಿ ಆಪರೇಷನ್ ಅಭ್ಯಾಸ್ ಕಲ್ಪಿತ ಪ್ರದರ್ಶನ

11-5-25--krs1 (42)
Published on

ಕೆ.ಆರ್.ಸಾಗರ: ರಾಜ್ಯಗಳ ಅಣೆಕಟ್ಟೆಗಳಿಗೆ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಬಳಿ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಭಾನುವಾರು ಜಿಲ್ಲಾಧಿಕಾರಿ ಕುಮಾರ ಅವರ ನೇತೃತ್ವದಲ್ಲಿ ಆಪರೇಷನ್ ಅಭ್ಯಾಸ್ ಕಲ್ಪಿತ ಪ್ರದರ್ಶನ ನಡೆಯಿತು.

ಜಲ ಅವಘಡದ ಬಗ್ಗೆ ಬೃಂದಾವನದ ದೋಣಿ ವಿಹಾರ ಕೇಂದ್ರದಲ್ಲಿ, ಬೆಂಕಿ ಅವಘಡದ ಬಗ್ಗೆ ಪೊಲೀಸ್ ವಸತಿ ಹಾಗೂ ಕೆಎಸ್‌ಟಿಡಿಸಿ ಹೋಟೆಲ್‌ನಲ್ಲಿ ಮತ್ತು ಬಾಂಬ್ ಬ್ಲಾಸ್ಟ್ ಬಗ್ಗೆ ಬೃಂದಾವನ ಉದ್ಯಾನವನದಲ್ಲಿ ಕಲ್ಪಿತ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಭಾನುವಾರ ಸಂಜೆ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರದಲ್ಲಿ ಪ್ರವಾಸಿಗರು ದೋಣಿಯಿಂದ ಮಗುಚಿಕೊಂಡ ಸಂದರ್ಭದಲ್ಲಿ ಪ್ರವಾಸಿಗರನ್ನು ರಕ್ಷಣೆ ಮಾಡುವ ಬಗ್ಗೆ ಪ್ರದರ್ಶನ ನಡೆಸಲಾಯಿತು.

ಬೆಂಕಿ ಅವಘಡದಲ್ಲಿ ಪೊಲೀಸ್ ಗೆಸ್ಟ್‌ಹೌಸ್ ಮತ್ತು ಕೆಎಸ್‌ಡಿಸಿ ಹೋಟೆಲ್‌ನಲ್ಲಿ ನಡೆದ ಅವಘಡದಲ್ಲಿ ಕಟ್ಟಡದಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯಾವ ರೀತಿ ರಕ್ಷಣೆ ಮಾಡುತ್ತಾರೆ ಮತ್ತು ಗಾಯಗೊಂಡವರಿಗೆ ಆರೋಗ್ಯ ಇಲಾಖೆ ಚಿಕಿತ್ಸೆ ನೀಡುವ ಬಗ್ಗೆ ಕಲ್ಪಿತ ಪ್ರದರ್ಶನ ಗಮನ ಸೆಳೆಯಿತು.

ಸಾವಿರಾರು ಪ್ರವಾಸಿಗರು ಇರುವ ಬೃಂದಾವನದಲ್ಲಿ ಉದ್ಯಾನವನದಲ್ಲಿ ಬಾಂಬ್ ಬ್ಲಾಸ್ಟ್ ನಡೆಸಿ ಇಲ್ಲಿ ಗಾಯಗೊಂಡವರು ಮತ್ತು ಜೀವಂತವಾಗಿರುವ ಬಾಂಬ್ ಹುಡುಕಿ ನಿಷ್ಕ್ರಿಯಗೊಳಿಸುವ ಬಗ್ಗೆ ಕಲ್ಪಿತ ಪ್ರದರ್ಶನ ನಡೆಯಿತು. ಇದರ ಮಾಹಿತಿ ಪಡೆದು ಪೊಲೀಸರು, ಜಿಲ್ಲಾಡಳಿತ, ಅಗ್ನಿ ಶಾಮಕದಳ ಆರೋಗ್ಯ ಇಲಾಖೆ, ಎನ್‌ಸಿಸಿ ವಿದ್ಯಾರ್ಥಿಗಳು, ಯಾವ ರೀತಿ ಪ್ರಥಮ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಉತ್ತಮವಾಗಿತ್ತು, ಇದನ್ನು ಸಾವಿರಾರು ಪ್ರವಾಸಿಗರು ವೀಕ್ಷಿಸಿದರು.

ರಾಯಲ್ ಆರ್ಕಿಡ ಹೋಟೆಲ್ ಮತ್ತು ಕೆಎಸ್‌ಡಿಸಿ ಹೋಟೆಲ್‌ನಲ್ಲಿ ಬ್ಲಾಕ್‌ಔಟ್ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು.

ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಕಲ್ಪಿತ ಪ್ರದರ್ಶನದ ನೋಡೆಲ್ ಅಧಿಕಾರಿ ರಾಘವೇಂದ್ರ ಮಾರ್ಗದರ್ಶನದಲ್ಲಿ ಅವಘಡಗಳು ಸಂಭವಿಸಿದಾಗ ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಗಾಯಗೊಂಡವರನ್ನು ಚಿಕಿತ್ಸೆಗೆ ಹೇಗೆ ಸಾಗಿಸಬೇಕು, ನೀರಿನಲ್ಲಿ ಬಿದ್ದವರನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದನ್ನು ತಿಳಿಸಿಕೊಡಲಾಯಿತು

ಜಿಪಂ ಸಿಇಒ ಕೆ.ಆರ್.ನಂದಿನಿ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಹೇಮಾವತಿ ಶ್ರೀನಿವಾಸ್, ಶಿವಮೂರ್ತಿ, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಅಗ್ನಿಶಾಮಕ ದಳದ ಜಿಲ್ಲಾ ಮಟ್ಟದ ಅಧಿಕಾರಿ ರಾಘವೇಂದ್ರ, ಶ್ರೀರಂಗಪಟ್ಟಣ ತಾಲೂಕು ಪ್ರಭಾರ ತಹಸೀಲ್ದಾರ್ ರವಿಶಂಕರ್ , ಕಾ.ನೀ.ನಿಗಮ ಕಾರ್ಯಪಾಲಕ ಜಯಂತ್, ಡಿವೈಎಸ್‌ಪಿ ಶಾಂತಮೂರ್ತಿ, ಕೆಎಸ್‌ಐಎಸ್‌ಎಫ್ ಡಿವೈಎಸ್‌ಪಿ ಪ್ರಮೋದ್, ಅಗ್ನಿಶಾಮಕ ದಳ ಪೊಲೀಸ್ ಇಲಾಖೆ, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ, ಅರೋಗ್ಯ ಇಲಾಖೆ, ಕಂದಾಯ ಇಲಾಖೆ, ಸೆಸ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net