ಕೆಆರ್‌ಎಸ್‌ನ ರಾಜ್ಯ ಯುವ ಸಮಾವೇಶ 12ಕ್ಕೆ

IMG-20230109-WA0078.jpg
Published on

ದಾವಣಗೆರೆ: ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಜ.12ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯಮಟ್ಟದ ಯುವ ಸಮಾವೇಶ ನಡೆಯಲಿದೆ.

ಅಂದು ಬೆಳಗ್ಗೆ 10:30ಕ್ಕೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಾಗುವುದು ಎಂದು ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷದ ಸಂಸ್ಥಾಪಕ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪಕ್ಷದ ಹಲವು ನಾಯಕರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ದೇಶ ಮತ್ತು ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಮತ್ತು ಅಭಿವೃದ್ಧಿಯ ದಾರಿಯಲ್ಲಿ ಯುವಜನರ ಪಾತ್ರ ಏನೆಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು. ಸಮಾವೇಶದಲ್ಲಿ 5 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕೆಆರ್‌ಎಸ್ ಪಕ್ಷದಿಂದ ಈ ಬಾರಿಯ ವಿಧಾನಸಭಾ ಕ್ಷೇತ್ರ ಚುನಾವಣೆಗೆ 60 ಜನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಕಣಕ್ಕಿಳಿಸಲು ಹಂತ ಹಂತವಾಗಿ ಉಮೇದುವಾರರ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಸುರೇಶ ಸಂಗಾಳ, ಪದಾಧಿಕಾರಿಗಳಾದ ಚಂದ್ರಶೇಖರ್, ಕೆ.ಎಸ್. ವೀರಭದ್ರಪ್ಪ, ಜಿ.ಎಂ. ಮಂಜುನಾಥ್, ಸೈಯದ್ ಸಮೀವುಲ್ಲಾ, ಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.

----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net