

ಚಿತ್ರದುರ್ಗ: ಕೆಆರ್‌ಎಸ್ ಅಣೆಕಟ್ಟು ಸಂಬಂಧ ಮೈಸೂರು ಮಹರಾಜರು ತಮ್ಮ ಮನೆತನದ ಬಂಗಾರ ಅಡವಿಟ್ಟು ಅಭಿವೃದ್ಧಿ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾರ್ಯ ಇತಿಹಾಸದ ಪುಟಗಳಲ್ಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ತಜ್ಞರಿದ್ದಾರೆ, ಬಲ್ಲವರೂ ಇದ್ದಾರೆ. ಆದರೆ, ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಪಕ್ಷದ ಸಚಿವರೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಲಾರೆ ಎಂದರು.
ಹೊರವಲಯದ ಕುಂಚಿಗನಾಳ್ ಸಮೀಪ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬುದು ಜನಾಭಿಪ್ರಾಯ. ಅದಕ್ಕಾಗಿ ನೂತನ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ಗೆ ಹಸ್ತಾಂತರಿಸಲು ಶಾಸಕರೆಲ್ಲ ಸೇರಿ ನಿರ್ಧರಿಸಿದ್ದೇವೆ. ಈ ವಿಚಾರವನ್ನು ಸಿಎಂ ಗಮನಕ್ಕೂ ತಂದಿದ್ದೇವೆ ಎಂದರು.
ಡಿಸಿ ಕಚೇರಿಗೆ ನೂತನ ಸ್ಥಳ ನಿಗದಿ ಮಾಡಿ ಕಟ್ಟಡ ನಿರ್ಮಿಸಬೇಕಿದೆ. ಜಿಲ್ಲಾಧಿಕಾರಿ ಮನೆ 16 ಎಕರೆ, ಅದಕ್ಕೆ ಹೊಂದಿಕೊಂಡಂತೆ 9 ಎಕರೆ ಜಾಗವಿದೆ. ಆದ್ದರಿಂದ ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಮರ್ಪಕವಾಗಿ ಯೂರಿಯಾ ಪೂರೈಕೆ ಮಾಡಿಲ್ಲ. ಬೇಡಿಕೆ, ಪೂರೈಕೆ ವ್ಯತ್ಯಾಸವಾಗಿರುವ ಕಾರಣ ರಾಜ್ಯದಲ್ಲಿ ಕೊರತೆ ಉಂಟಾಗಿದೆ. ರೈತರಿಂದ ಮರುಬಳಕೆ ಕೂಡ ಅಧಿಕವಾಗಿದೆ. ಅಲ್ಲದೆ, ಮುಂಗಾರು ಪೂರ್ವ ಮಳೆಯಾಗಿದ್ದರಿಂದ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರು.
ಯೂರಿಯಾ ಸಂಬಂಧ ಈಗ ಸಮಸ್ಯೆ ಇಲ್ಲ. ಆದರೂ ಸಿಎಂ ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಮಳೆಯಾಗದ ಜಿಲ್ಲೆಗಳು ಇವೆ. ಹೀಗಾಗಿ ಮಹದೇವನಿಗೆ ಪೂಜೆ ಮಾಡಬೇಕಾದ ಅಗತ್ಯವಿದೆ. ಅಧಿಕಾರ ಹಂಚಿಕೆ ವಿಚಾರ ಕುರಿತಂತೆ ಮೇಲ್ಮಟ್ಟದಲ್ಲಿ ಏನೆಲ್ಲ ಚರ್ಚೆ ನಡೆದಿದೆಯೋ ಅದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.