

ಮೈಸೂರು: ಕೆ.ಆರ್.ಎಸ್. ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವುದು ಸೂಕ್ತ ಮತ್ತು ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬುದಾಗಿ ನಾಮಕರಣ ಮಾಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವಂತೆ ಕೋರಿ ಶಾಸಕ ಕೆ.ಹರೀಶ್‌ಗೌಡ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆ ರಸ್ತೆಯಲ್ಲಿ 2 ಆಸ್ಪತ್ರೆ ನಿರ್ಮಾಣ ಮಾಡಿದ್ದು, ಐದು ಜಿಲ್ಲೆಗಳ ಸುಮಾರು 77 ಲಕ್ಷ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರದ ನಡಾವಳಿ ಪ್ರಕಾರ ವೃತ್ತ, ರಸ್ತೆ, ಉದ್ಯಾನಕ್ಕೆ ಹೆಸರಿಡಲು ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರ ಪ್ರಕಾರವೇ ಪಾಲಿಕೆ ಆಯುಕ್ತರು ಪಾಲಿಕೆ ಸ್ಥಾಯಿ ಸಮಿತಿಗೆ ಕಳುಹಿಸಿದ್ದಾರೆ. ಸ್ಥಾಯಿ ಸಮಿತಿ ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಕೆಲ ಸಂಘ ಸಂಸ್ಥೆಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಟೀಕೆ ಮಾಡುತ್ತ ಬಂದಿದ್ದವರು. ಅಪರೂಪಕ್ಕೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪೇನು ಎಂದು ಹೇಳಿದ್ದಾರೆ. ಬಿಜೆಪಿಯವರ ಹಿಡನ್ ಅಜೆಂಡಾ ಅರ್ಥ ಮಾಡಿಕೊಂಡು ಹೇಳಿದ್ದಾರೆ. ಅವರಿಗೆ ಜ್ಞಾನೋದಯವಾಗಿದೆ. ಬಿಜೆಪಿಯವರಿಗೆ ಬರೀ ವಿರೋಧ ಮಾಡುವುದನ್ನು ಬಿಟ್ಟರೇ ಬೇರೇನೂ ಗೊತ್ತಿಲ್ಲ ಎಂದು ಹರಿಹಾಯ್ದರು.
ನಾಥೂರಾಮ್ ಗೋಡ್ಸೆ ರಸ್ತೆ ಎಂದು ಹೆಸರಿಡಲಾಗಿದೆ. ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಲಾಗಿದೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಷಾ ಹೆಸರಿನಲ್ಲಿ ರಸ್ತೆ ಇದೆ. ಇದಕ್ಕೆಲ್ಲ ಬಿಜೆಪಿಯವರು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯಿಸಿದ ಲಕ್ಷ್ಮಣ್ ಅವರು, ಮುನಿರತ್ನ ರಾಜಕೀಯದಲ್ಲಿ ಇರುವುದೇ ದುರಂತ. ಕ್ರಿಮಿನಲ್ ಕೇಸ್ ಇರುವ ಕ್ರಿಮಿನಲ್ ವ್ಯಕ್ತಿ. ಸುಖಾಸುಮ್ಮನೆ ಡಿ.ಕೆ.ಸುರೇಶ್, ಡಿ.ಕೆ. ಶಿವಕುಮಾರ್, ಕುಸುಮಾ ವಿರುದ್ಧ ಆರೋಪ ಮಾಡಿದ್ದಾರೆ. ಮೊಟ್ಟೆ ಒಳಗಡೆ ಯಾವ ರೀತಿ ಆ್ಯಸಿಡ್ ಹಾಕುತ್ತಾರೆ? ಬಿಜೆಪಿಯವರು ಮುನಿರತ್ನ ಯಾರು ಅಂತ ಜನಕ್ಕೆ ಹೇಳಬೇಕು ಎಂದು ಟೀಕಿಸಿದರು.
ಸಿ.ಟಿ ರವಿ ಮೂಲಕ ಬಿ.ವೈ.ವಿಜಯೇಂದ್ರ ತೆಗೆಯಲು ಹುನ್ನಾರ ನಡೆಯುತ್ತಿದೆ. ಜನವರಿ ವೇಳೆಗೆ ವಿಜಯೇಂದ್ರ ಬದಲಾವಣೆಯಾಗಲಿದ್ದಾರೆ ಎಂದು ಹೊಸಬಾಂಬ್ ಸಿಡಿಸಿದರು.
ಪ್ರಲ್ಹಾದ್ ಜೋಶಿ ಒಬ್ಬ ಜೋಕರ್. ಗಾಂಧೀಜಿಯನ್ನು ನಕಲಿ ಗಾಂಧಿ ಎನ್ನುವ ನಿಮಗೆ ಮಾನ ಮರ್ಯಾದೆ ಇಲ್ಲವೇ? ಎಂದು ಪ್ರಶ್ನಿಸಿದರು.
ಶ್ರೀ ಜಯಬಸವ ಮೃತ್ಯುಂಜಯ ಸ್ವಾಮೀಜಿ ಎಲ್ಲಿದ್ದಾರೆ? ನಿಮ್ಮ ಜಾತಿ ಹೆಣ್ಣು ಮಗಳಿಗೆ ಈ ರೀತಿ ಪದ ಬಳಸಿದ್ದಾರೆ. ಏಕೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದೀರಿ? ವೀರಶೈವ ಲಿಂಗಾಯತ ಸಮುದಾಯ ಏಕೆ ಸುಮ್ಮನಿದೆ? ಎಂದು ಪ್ರಶ್ನಿಸಿದರು.