ಮೈಸೂರು: ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಮಂಡ್ಯ ತಾಲೂಕು ಸುಂಡಹಳ್ಳಿ ಗ್ರಾಮದ ರಾಜಶೇಖರ್ ಅವರ ಪುತ್ರ ಸಚ್ಚಿನ್ ಆರ್ಯ (23) ಮೃತಪಟ್ಟ ವಿದ್ಯಾರ್ಥಿ.
ಮಂಡ್ಯದ ಕಾವೇರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಚ್ಚಿನ್, ಸೆಪ್ಟಂಬರ್ 30 ರಂದು ಮನೆಯಿಂದ ಕಾಣೆಯಾಗಿದ್ದರೆನ್ನಲಾಗಿದೆ. ಮನೆಯವರು ಹುಡುಕಾಟ ನಡೆಸಿದರೂ ಆತನ ಸುಳಿವು ದೊರೆತಿರಲಿಲ್ಲ. ರಾಮನಹಳ್ಳಿ ಬಳಿ ಶುಕ್ರವಾರ ಕೆಆರ್‌ಎಸ್‌ನ ಹಿನ್ನೀರಿನಲ್ಲಿ ಶವ ತೇಲುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತನ ಮೇಲೆ ಇದ್ದ ಮಂಡ್ಯ ಪ್ರೀಮಿಯರ್ ಲೀಗ್, ಸಚ್ಚಿನ್ ಆರ್ಯ ಹೆಸರು ಇರುವ ಟೀ ಶರ್ಟ್ ಆಧಾರದ ಮೇಲೆ ಪೋಷಕರನ್ನು ಪತ್ತೆ ಮಾಡಿ ವಿಷಯ ತಿಳಿಸಲಾಗಿದೆ. ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.