ದಾವಣಗೆರೆ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಸಾಮಾನ್ಯರು, ಚಿಂತಕರು ಹಾಗೂ ಹಲವು ಸಂವಾದಗಳ ಮುಖೇನ ಚರ್ಚಿಸಿದ ಬಳಿಕ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ ಎಂದು ಪಕ್ಷದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಬಿ. ಸೋಮಶೇಖರ ತಿಳಿಸಿದರು.
ರಾಜ್ಯವನ್ನು ಸ್ವಚ್ಛ, ಸದೃಢ, ಸಮೃದ್ಧ, ಸಾಂಸ್ಕೃತಿಕ ಹಾಗೂ ಹಸಿರು ಕರ್ನಾಟಕವಾಗಿಸಲು ಒಟ್ಟು ನವಸೂತ್ರಗಳ ಪ್ರಣಾಳಿಕೆ ತಯಾರಾಗಿದೆ. ಇದರಡಿ ಪ್ರಮುಖ ಅಂಶಗಳಡಿ ಜನರಿಗೆ ಮತ ಕೇಳಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಖಾಲಿ ಇರುವ 3 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ, ಭ್ರಷ್ಟಾಚಾರಮುಕ್ತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಬೇಕು. ಬಡತನ ನಿವಾರಣೆ ಭಾಗವಾಗಿ ಮದ್ಯ ನಿಷೇಧ, ಪ್ರತಿ ಜಿಲ್ಲೆಯಲ್ಲೂ ಒಮದು ಸರ್ಕಾರಿ ವೈದ್ಯಕೀಯ ಕಾಲೇಜು, ತಾಲೂಕಿಗೊಂಡು ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು.
ವೈಜ್ಞಾನಿಕ ಬೆಲೆ ಪದ್ಧತಿ ಜಾರಿ, ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲೇ ಮೌಲ್ಯವರ್ಧನೆಗೆ ಕ್ರಮ. ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ, ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ, ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 2 ಸಾವಿರ ರೂ. ಮಾಸಾಶನ, ಎಲ್ಲ ವಿಧದ ಮಾಸಾಶನಗಳನ್ನು 3 ಸಾವಿರ ರೂ.ಗೆ ಏರಿಕೆ ಮಾಡುವ ಅಂಶಗಳು ಪ್ರಣಾಳಿಕೆಯಲ್ಲಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎನ್.ಎಸ್. ಅಭಿಷೇಕ್, ಗುಡ್ಡಪ್ಪ, ಕೆ. ಅಜ್ಜಪ್ಪ, ಕೆ.ಮಲ್ಲಪ್ಪ ಇದ್ದರು.
---