ಕೆಂಭಾವಿಯಲ್ಲಿ 8ಗಂಟೆ ವಿದ್ಯುತ್ ನಿಲುಗಡೆ

Published on

ಕೆಂಭಾವಿ: ಇಬ್ಬರು ಜವಾಬ್ದಾರಿಯುತ ಅಧಿಕಾರಿಗಳ ಕೆಲಸದ ಹೊಂದಣಿಕೆ ಮತ್ತು ಸಂಪರ್ಕ ಕೊರತೆಯಿಂದ ಪಟ್ಟಣದ ಜನತೆ ಹೈರಾಣಾದ ಪ್ರಸಂಗ ಗುರುವಾರ ನಡೆಯಿತು.

ಈ ಇಬ್ಬರು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಎಂಟು ಗಂಟೆಗಳ ಕಾಲ ವಿದ್ಯುತ್ ನಿಲುಗಡೆಯಾಗಿದ್ದು ಇದರಿಂದ ಜನತೆ ಬೇಸಿಗೆ ಝಳದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಯಿತು.

ಪಟ್ಟಣದ ೧೧೦ ಕೆವಿ ವಿದ್ಯುತ್ ಕೇಂದ್ರದಿಂದ ತಾಲೂಕು ಕೇಂದ್ರವಾದ ಹುಣಸಗಿ ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಹೊಂದಿದೆ. ಆದರೆ ಯಾವುದೇ ವಿದ್ಯುತ್ ತೊಂದರೆಯಾದರೆ ಸಂಬಧಿಸಿದ ವಿದ್ಯುತ್ ಕೇಂದ್ರದಿಂದ ಸಂಪರ್ಕ ಕಡಿತಗೊಳಿಸಿ ದುರಸ್ತಿಗೊಳಿಸುವುದು ವಾಡಿಕೆ. ಹೀಗಾಗಿ ಗುರುವಾರ ನಡೆದ ದುರಸ್ತಿ ಕಾರ್ಯದಲ್ಲಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಸುಮಾರು ೮ಗಂಟೆಗೂ ಅಧಿಕ ವಿದ್ಯುತ್ ನಿಲುಗಡೆಗೊಳಿಸಿದ್ದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎರಡು ಗಂಟೆಗೂ ಅಧಿಕ ವಿದ್ಯುತ್ ಕಡಿತಗೊಳಿವುದಿದ್ದರೆ ಒಂದು ದಿನ ಮುಂಚಿತವಾಗಿ ಜನತೆಗೆ ಸೂಚನೆ ನೀಡಬೇಕು ಎಂಬುದು ಇಲಾಖೆಯ ಆದೇಶವಾಗಿದೆ. ಆದರೆ ಈ ನಿಯಮ ಇಲ್ಲಿ ಗಾಳಿಗೆ ತೂರಿ ಬೆಳಗ್ಗೆ ೧೧ಕ್ಕೆ ಹುಣಸಗಿ ಉಪ ವಿಭಾಗದ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ (ಎಲ್‌ಸಿ) ತೆಗೆದುಕೊಂಡು ದುರಸ್ತಿ ಕಾರ್ಯದಲ್ಲಿ ತೊಡಗಿ ಸಂಜೆ ೭ಕ್ಕೆ ಮರಳಿ ಎಲ್‌ಸಿ ನೀಡಿದ್ದಾರೆ. ಈ ಬಗ್ಗೆ ಇಲ್ಲಿನ ಜನತೆ ಕೆಂಭಾವಿ ವಲಯಾಧಿಕಾರಿಗೆ ಸಂಪರ್ಕಿಸಿದರೆ ನಮಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಒಟ್ಟಾರೆ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆ ಮತ್ತು ಹೊಂದಾಣಿಕೆ ಕೊರತೆಯಿಂದ ಜನರು ಹೈರಾಣಾಗಿದ್ದಂತು ನಿಜ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net