

ಕೆಂಭಾವಿ" ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ವಲಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ತೀವ್ರ ಕುಸಿತ ಕಂಡಿದ್ದು ಇದರಿಂದ ಪಾಲಕರಿಗೆ ಆತಂಕ ಮನೆ ಮಾಡಿದೆ.
ಪಟ್ಟಣದಲ್ಲಿನ ಮೂರು ಸರ್ಕಾರಿ ಪ್ರೌಢಶಾಲೆ ಸೇರಿ ವಲಯದಲ್ಲಿ ಒಟ್ಟು ೧೧ ಸರ್ಕಾರಿ ಪ್ರೌಢಶಾಲೆಗಳಿದ್ದು, ಕೇವಲ ಒಂದೆರಡು ಶಾಲೆ ಹೊರತುಪಡಿಸಿ ಉಳಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಶೇಕಡಾವಾರು ಲೆಕ್ಕದಲ್ಲಿ ಅರ್ಧಕ್ಕಿಂತ ಕೆಳಗೆ ಕುಸಿದಿದೆ.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ ಫಲಿತಾಂಶ ಸಂಪೂರ್ಣ ಕೆಳ ಹಂತಕ್ಕೆ ತಲುಪಿದ್ದು ಇದರಿಂದ ಪಾಲಕರಲ್ಲಿ ಆತಂಕವಾಗಿದೆ. ಒಂದು ಕಾಲದಲ್ಲಿ ಜಿಲ್ಲೆಗೆ ಉತ್ತಮ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಈ ಶಾಲೆ ಈಗ ನುರಿತ ಶಿಕ್ಷಕರ ಮತ್ತು ಸ್ಥಳೀಯ ರಾಜಕೀಯ ಒತ್ತಡದಿಂದ ಸಂಪೂರ್ಣ ನಲುಗಿ ಹೋಗಿದೆ.
ಪ್ರತಿವರ್ಷ ಈ ಶಾಲೆಯಲ್ಲಿ ೮ ರಿಂದ ೧೦ನೇ ತರಗತಿಯವರೆಗೆ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ನುರಿತ ಶಿಕ್ಷಕರ ಕೊರತೆಯಿಂದ ಶಿಕ್ಷಣ ಮೌಲ್ಯ ಸಂಪೂರ್ಣ ಕುಸಿಯುತ್ತಿದೆ ಎಂಬ ಆತಂಕ ಎದುರಾಗಿದೆ.
ಪಟ್ಟಣದ ಹಲವು ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರತಿವರ್ಷ ವಿಷಯವಾರು ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿದ್ದು ಈ ತಾತ್ಕಾಲಿಕ ನೇಮಕಾತಿಯಲ್ಲಿ ಸರ್ಕಾರದ ನಿಯಮ ಗಾಳಿಗೆ ತೂರಿ ಜಾತಿ ಬಲ, ಹಣಬಲ ಮತ್ತು ರಾಜಕೀಯ ಬಲದಿಂದ ಶಿಕ್ಷಕರ ವೃತ್ತಿಗೆ ಅನರ್ಹವಾದ ವ್ಯಕ್ತಿಗಳು ನೇಮಕವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಶಿಕ್ಷಣ ಕಲಿಸುವ ಸಾಮರ್ಥ್ಯ ಇಲ್ಲದವರು ೧೦ನೇ ತರಗತಿಗಳಲ್ಲಿ ಪಾಠ ಮಾಡುತ್ತಿರುವುದು ಎಷ್ಟು ಸರಿ ?ಎಂಬ ಪ್ರಶ್ನೆ ಫಲಿತಾಂಶ ಕುಸಿತದಿಂದ ಹಲವರಿಗೆ ಮನವರಿಕೆಯಾಗಿದೆ. ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಒಟ್ಟು ೮೦ ವಿದ್ಯಾರ್ಥಿಗಳಲ್ಲಿ ಕೇವಲ ೧೩ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೧೬.೩೨ ಫಲಿತಾಂಶ ಬರುವ ಮೂಲಕ ಪಾತಾಳಕ್ಕೆ ಕುಸಿದಿದೆ.
ಎಲ್ಲ ಸರ್ಕಾರಿ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕರ್ತವ್ಯ ಶಿಕ್ಷಕರ ಮೇಲಿದೆ. ಆದರೆ ಹಲವು ಶಾಲೆಗಳಲ್ಲಿ ಶಿಕ್ಷಣ ಕಲಿಸುವ ಅರ್ಹತೆ ಹೊಂದಿರದ (ಯಾವುದೆ ಪದವಿ ಪಡೆಯದ) ಗೌರವ ಶಿಕ್ಷಕರಿಂದ ಶಿಕ್ಷಣಕ್ಕೆ ಕುಂದು ಬರುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ಶೈಕ್ಷಣಿಕ ವರ್ಷದಿಂದ ಕಾಯಂ ಶಿಕ್ಷಕರನ್ನು ನೇಮಿಸಿ ಫಲಿತಾಂಶ ವೃದ್ಧಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಎಲ್ಲ ವಿಷಯಗಳ ಪಾಠ ಮಾಡುವಂತೆ ಶಿಕ್ಷರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.