

ಕೆಂಭಾವಿ: ಪಟ್ಟಣದ ಪುರಸಭೆ ಚುನಾವಣೆ ಮುಗಿದು ಬರೋಬ್ಬರಿ ಎರಡೂವರೆ ವರ್ಷ ಗತಿಸಿದ ನಂತರ ಪುರಪಿತೃ ಗದ್ದುಗೆಗೆ ದಿನಾಂಕ ನಿಗದಿಯಾಗಿದ್ದು ಇದರಿಂದ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಕಳೆದ ಎರಡು ದಿನಗಳ ಹಿಂದಷ್ಟೆ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದ್ದು ಮ್ಯಾಜಿಕ್ ನಂಬರ್‌ನ ಗಡಿದಾಟಿದ ಬಿಜೆಪಿ ಪಾಳಯದಲ್ಲಿ ಈಗ ಮುಸುಕಿನ ಗುದ್ದಾಟ ಶುರುವಾದ ಲಕ್ಷಣ ಕಾಣುತ್ತಿವೆ. ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ 13 ಬಿಜೆಪಿ, 8 ಕಾಂಗ್ರೆಸ್ ಹಾಗೂ 2 ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದು ಈಗ ಪಕ್ಷೇತರ ಸದಸ್ಯರೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿAದ ಕಾಂಗ್ರೆಸ್ ಸಂಖ್ಯಾಬಲ 10ಕ್ಕೇರಿದೆ.
ಆದರೆ 13 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಪುರಸಭೆ ಮೆಟ್ಟಿಲು ಏರಿರುವ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದೆ. ಸರ್ಕಾರ ನಿಗದಿಪಡಿಸಿದ ಮೀಸಲಾತಿ ಅನ್ವಯ ಈ ಬಾರಿ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಎ (ಬಿಸಿಎ) ಗೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದೆ. ಸ್ಪಷ್ಟ ಬಹುಮತದೊಂದಿಗೆ ಪುರಸಭೆ ಪ್ರವೇಶಿಸಿದ ಬಿಜೆಪಿ ಪಕ್ಷ ಗದ್ದುಗೆ ಏರಲು ತುದಿಗಾಲಲ್ಲಿ ನಿಂತಿದ್ದು ಈಗ ಚುನಾಯಿತರಾದ ಬಿಜೆಪಿ ಸದಸ್ಯರಲ್ಲಿ ಮೂರು ಜನ ಮಹಿಳೆಯರು ಮತ್ತು ಇಬ್ಬರು ಪುರುಷ ಅಭ್ಯರ್ಥಿಗಳಿದ್ದು ಪ್ರಮುಖವಾಗಿ ಇಬ್ಬರು ಪುರುಷ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷ ಯಾರಿಗೆ ಮನ್ನಣೆ ನೀಡಲಿದೆ ಎಂಬುದು ಕಾದು ನೋಡಬೇಕಿದೆ.
ಶುರುವಾಗುತ್ತಾ ರೆಸಾರ್ಟ್ ರಾಜಕೀಯ: ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಹೆಚ್ಚು ಯುವ ಸದಸ್ಯರೆ ತುಂಬಿದ ಬಿಜೆಪಿಯಲ್ಲಿ ಈಗಾಗಲೇ ತಾಳಮೇಳ ಶುರುವಾಗಿದ್ದು, ದಿನಾಂಕ ನಿಗದಿಯಾಗುತ್ತಿದ್ದಂತೆ ರೆಸಾರ್ಟ್ ರಾಜಕೀಯ, ಸದಸ್ಯರಿಗೆ ದೊರೆಯಲಿದೆಯಾ ರಾಜಾತಿಥ್ಯಾ ಎಂಬ ನೂರೆಂಟು ಪ್ರಶ್ನೆಗಳು ಹರಿದಾಡುತ್ತಿವೆ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಅವರ ತವರೂರು ಯಾಳಗಿ ಕೇವಲ ಪಟ್ಟಣದಿಂದ ಐದು ಕಿಮೀ ಅಂತರದಲ್ಲಿದೆ. 13 ಸದಸ್ಯರ ಬಲಹೊಂದಿದ್ದ ಜಿಲ್ಲಾಧ್ಯಕ್ಷರ ಸ್ವ ಪ್ರತಿಷ್ಠೆ ಕಣವೆಂದೆ ಗುರುತಿಕೊಂಡಿರುವ ಪುರಸಭೆ ಗದ್ದುಗೆ ಏರಲು ಅಮೀನರೆಡ್ಡಿ ಯಾಳಗಿ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಆಪರೇಶನ್ ಕಮಲ ಎದುರಾಗುವ ಭೀತಿಯಿಂದ ಎಲ್ಲ ಸದಸ್ಯರನ್ನು ಅಜ್ಞಾತ ಸ್ಥಳದಲ್ಲಿ (ರೆಸಾರ್ಟ್) ಶಿಫ್ಟ್ ಮಾಡಲಿದೆಯಾ ಪಕ್ಷ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಟ್ಟಾರೆ ಬೇಟೆಗಾಗಿ ಹುಲಿಯಂತೆ ಕಾಯುತ್ತಿದ್ದ ಸದಸ್ಯರಿಗೆ ಗದ್ದುಗೆ ಏರುವ ಕಾಲ ಕೂಡಿ ಬಂದಿದ್ದು ಯಾರಿಗೆ ಸಿಗಲಿದೆ ಅಧ್ಯಕ್ಷ ಪಟ್ಟ ಎಂಬುದನ್ನು ಕಾದು ನೋಡಬೇಕಿದೆ.
ಕೆಂಭಾವಿ ಪುರಸಭೆಯ ವಿವರ: ಒಟ್ಟು ವಾರ್ಡ್ 23, ಒಟ್ಟು ಸದಸ್ಯರು 23, ಬಿಜೆಪಿ 13, ಕಾಂಗ್ರೇಸ್ 8, ಪಕ್ಷೇತರ 2, ಕಾಂಗ್ರೆಸ್‌ಗೆ ಪಕ್ಷೇತರ ಬೆಂಬಲ 2, ಸಂಸದ, ಶಾಸಕ ಸೇರಿ 12, ಮ್ಯಾಜಿಕ್ ನಂ 12.